ಅಕ್ಷರ್​ ಪಟೇಲ್ ಕಾಲು ಹಿಡಿಯಲು ಕೊಹ್ಲಿ ಯತ್ನಿಸಿದಾಗ ಏನಾಯ್ತು ನೋಡಿ... ವಿಡಿಯೋ ವೈರಲ್​! Virat Kohli

Virat Kohli
Published on

Virat Kohli : ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್​ ಇಂಡಿಯಾ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಈ ಮೆಗಾ ಟೂರ್ನಮೆಂಟ್‌ನಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದಿರುವ ರೋಹಿತ್​ ಶರ್ಮ ಪಡೆ ಲೀಗ್ ಹಂತವನ್ನು ಅಜೇಯವಾಗಿ ಕೊನೆಗೊಳಿಸಿತು. ಭಾನುವಾರ (ಮಾ.02) ದುಬೈನಲ್ಲಿ ನಡೆದ ಗ್ರೂಪ್ ಹಂತದ ಅಂತಿಮ​ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 44 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ಗೆ ಸಿದ್ಧವಾಗಿದೆ. ಮಂಗಳವಾರ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ನಿನ್ನೆ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಆಲ್ ರೌಂಡರ್ ಅಕ್ಷರ್ ಪಟೇಲ್ ಅವರ ಕಾಲುಗಳನ್ನು ಸ್ಪರ್ಶಿಸಲು ಯತ್ನಿಸಿದರು. ಆದರೆ, ಕೊಹ್ಲಿ ಆ ರೀತಿ ಏಕೆ ಮಾಡಿದರು ಎಂದು ತಿಳಿಯಲು, ನೀವು ಈ ಸ್ಟೋರಿನಾ ಸಂಪೂರ್ಣ ಓದಬೇಕು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಶ್ರೇಯಸ್ ಅಯ್ಯರ್ (79), ಅಕ್ಷರ್ ಪಟೇಲ್ (42) ಮತ್ತು ಹಾರ್ದಿಕ್ ಪಾಂಡ್ಯ (45) ಅವರ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 249 ರನ್ ಗಳಿಸಿತು. 250 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಿವೀಸ್​ ಪಡೆಗೆ ಭಾರತೀಯ ಸ್ಪಿನ್ನರ್‌ಗಳು ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಬ್ಲಾಕ್ ಕ್ಯಾಪ್ಸ್ ಬ್ಯಾಟ್ಸ್‌ಮನ್‌ಗಳು ಭಾರತೀಯ ಸ್ಪಿನ್ನರ್‌ಗಳ ಪರಾಕ್ರಮಕ್ಕೆ ತತ್ತರಿಸಿದರು. ನ್ಯೂಜಿಲೆಂಡ್ ತಂಡ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಿದ್ದರೆ, ಇತ್ತ ಕೇನ್ ವಿಲಿಯಮ್ಸನ್ ಮಾತ್ರ ಕ್ರೀಸ್​ನಲ್ಲಿ ಅಂಟಿಕೊಂಡು ಭಾರತವನ್ನು ಕಾಡುತ್ತಿದ್ದರು.

ಉಳಿದ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳನ್ನು ಎದುರಿಸಲು ಹೆಣಗಾಡುತ್ತಿದ್ದಾಗ, ಕೇನ್ ವಿಲಿಯಮ್ಸನ್​ ಮಾತ್ರ ಪರಿಣಾಮಕಾರಿಯಾಗಿ ಆಡಿದರು ಮತ್ತು ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಈ ವೇಳೆ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ, ವಿಲಿಯಮ್ಸನ್ ಅವರನ್ನು ಔಟ್ ಮಾಡಲು ಹಲವು ಪ್ರಯತ್ನಗಳನ್ನು ಮಾಡಿದರು. ಅಂತಿಮವಾಗಿ, ಅಕ್ಷರ್ ಪಟೇಲ್ ಅವರು ವಿಲಿಯಮ್ಸನ್ ಅವರ ವಿಕೆಟ್ ಪಡೆದರು.

ಅಕ್ಷರ್ ಪಟೇಲ್, ಕಿವೀಸ್ ಇನ್ನಿಂಗ್ಸ್‌ನ 41ನೇ ಓವರ್​ನಲ್ಲಿ ಬೌಲಿಂಗ್ ಮಾಡಿದರು. ಅಕ್ಷರ್ ಪಟೇಲ್​ ಎಸೆದ ಚೆಂಡನ್ನು ಮುಂದೆ ಬಂದು ಹೊಡೆಯಲು ವಿಲಿಯಮ್ಸನ್​ ಯತ್ನಿಸಿದರು. ಆದರೆ, ಚೆಂಡನ್ನು ಸರಿಯಾಗಿ ಜಡ್ಜ್​ ಮಾಡಲು ವಿಫಲವಾದರು. ಈ ವೇಳೆ ಚೆಂಡು ನೇರವಾಗಿ ವಿಕೆಟ್​ ಕೀಪರ್​ ಕೆ.ಎಲ್​. ರಾಹುಲ್​ ಕೈ ಸೇರಿತು. ಅವರು ಸುಲಭವಾಗಿ ಸ್ಟಂಪೌಟ್​ ಮಾಡುವ ಮೂಲಕ ವಿಲಿಯಮ್ಸನ್ ಅವರನ್ನು ಪೆವಲಿಯನ್​ಗೆ ಕಳುಹಿಸಿದರು. ಇದರೊಂದಿಗೆ ಭಾರತದ ಗೆಲುವು ಖಚಿತವಾಯಿತು. ಈ ವೇಳೆ ವಿರಾಟ್ ಕೊಹ್ಲಿ, ಬೇಗನೆ ಅಕ್ಷರ್ ಬಳಿ ಹೋಗಿ ಅವರ ಕಾಲುಗಳನ್ನು ಮುಟ್ಟಲು ಪ್ರಯತ್ನಿಸಿದರು. ಈ ವೇಳೆ ಅಕ್ಷರ್ ತಕ್ಷಣ ಕುಳಿತು ಅಯ್ಯೋ ನೀವೆಲ್ಲ ನಮ್ಮ ಕಾಲು ಹಿಡಿಯಬಾರದು ಅನ್ನೋ ರೀತಿಯಲ್ಲಿ ಕೊಹ್ಲಿಯತ್ತ ನೋಡಿ ನಗು ಚೆಲ್ಲಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net