

ಹರಾರೆ: ನೂತನ ಟಿ20 ವಿಶ್ವಚಾಂಪಿಯನ್ ಭಾರತ ತಂಡವನ್ನು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೋಲಿಸುವ ಮೂಲಕ ಜಿಂಬಾಬ್ವೆ ಶಾಕ್ ನೀಡಿದ್ದು, ಯುವ ಭಾರತ ತಂಡವನ್ನು ಹೀನಾಯ ವಾಗಿ ಟ್ರೋಲ್ ಮಾಡಲಾಗುತ್ತಿದೆ. ಜಿಂಬಾಬ್ವೆಯ ಚಾಣಾಕ್ಷ ಆಟಕ್ಕೆ ಯುವ ಭಾರತ ತಲೆಬಾಗಿದ್ದು, ಐಪಿಎಲ್ನಲ್ಲಿ ಮಿಂಚಿ ಭರವಸೆಯ ಆಟಗಾರರು ಎಂಬ ಹಣೆಪಟ್ಟಿಯನ್ನು ಪಡೆದಿದ್ದ ಆಟಗಾರರನ್ನು ಹೀನಾಯವಾಗಿ ಟ್ರೋಲ್ ಮಾಡಲಾಗುತ್ತಿದ್ದು, ನೀವು ಯಾವ ಸೀಮೆಯ ಚಾಂಪಿಯನ್ಸ್ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಟಾಸ್ ಗೆದ್ದು ಮೊದಲು ಆತಿಥೇಯರನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ ಭಾರತ ತಂಡವು ಎದುರಾಳಿಗಳನ್ನು 20 ಓವರ್ಗಳಲ್ಲಿ 115 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸುಲಭ ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡಿದ ಜಿಂಬಾಬ್ವೆ ಬೌಲರ್ಗಳು ಪ್ರವಾಸಿ ತಂಡವನ್ನು 19.5 ಓವರ್ಗಳಲ್ಲಿ 102 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಭಾರತದ ಪರ ಪದಾರ್ಪಣೆ ಮಾಡಿದ ಧ್ರುವ್ ಜುರೆಲ್, ಅಭಿಷೇಕ್ ಶರ್ಮ ಮತ್ತು ರಿಯಾನ್ ಪರಾಗ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದೆ ನಿರಾಸೆಯನ್ನುಂಟು ಮಾಡಿದರು.
ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭರವಸೆಯ ಆಟಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಧ್ರುವ್ ಜುರೆಲ್, ಅಭಿಷೇಕ್ ಶರ್ಮ ಮತ್ತು ರಿಯಾನ್ ಪರಾಗ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಈ ವಿಚಾರವಾಗಿ ರಿಯಾನ್ ಪರಾಗ್ರನ್ನು ಹೆಚ್ಚು ಟ್ರೋಲ್ ಮಾಡಲಾಗುತ್ತಿದೆ. ಏಕೆಂದರೆ ಇತ್ತೀಚಿಗೆ ರಿಯಾನ್ ಪರಾಗ್ ಸಂದರ್ಶನ ಒಂದರಲ್ಲಿ ನನ್ನನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಿಲ್ಲ ಹಾಗಾಗಿ ನಾನು ಈ ಬಾರಿ ಪಂದ್ಯಗಳನ್ನು ನೋಡುವುದಿಲ್ಲ ಎಂದು ಹೇಳಿ ಟೀಕಗೆ ಗುರಿಯಾಗಿದ್ದರು. ನೀನು ಯಾವ ಸೀಮೆಯ ಆಟಗಾರ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ನಿನ್ನನ್ನು ವಿಶ್ವಕಪ್ಗೆ ಆಯ್ಕೆ ಮಾಡಬೇಕೆನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದ್ದಾರೆ.
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಯುವ ಭಾರತ ತಂಡವು ತೀವ್ರ ಟೀಕೆಗೆ ಗುರಿಯಾಗಿದ್ದು, ಜುಲೈ 07ರಂದು ನಡೆಯುವ ಎರಡನೇ ಟಿ20 ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಲಿದೆಯಾ ಅಥವಾ ಸೋಲಿನ ಸುಳಿಗೆ ಸಿಲುಕಲಿದೆಯಾ ಎಂದು ಕಾದು ನೋಡಬೇಕಿದೆ.