

ನವದೆಹಲಿ: ಕಳೆದ ಇಪ್ಪತ್ತು ವರ್ಷಗಳಿಂದಲೂ ಜೀವನದಲ್ಲಿ ಒಂದೇ ರೀತಿಯ ಆಹಾರ ಶೈಲಿಯನ್ನು ಪಾಲಿಸಿಕೊಂಡು ಬಂದಿರುವ ಗೌತಮ್ ಗಂಭೀರ್, ಕ್ರಿಕೆಟ್ ವಿಷಯಕ್ಕೆ ಬಂದರೆ ಮೈದಾನದಲ್ಲಿ ಯಾವಾಗಲೂ ಚುರುಕುತನ ಹಾಗೂ ಹೊಸ ಪ್ರಯೋಗಗಳಿಗೆ ಹೆಚ್ಚು ಒಲವು ತೋರುವ ವ್ಯಕ್ತಿ. ಇದಕ್ಕೆ ಸಾಕ್ಷಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವು. ಈ ಪ್ರಶಸ್ತಿ ಜಯದೊಂದಿಗೆ ಭಾರತ ತಂಡದ ಮುಖ್ಯ ಕೋಚ್ ಸ್ಥಾನವನ್ನು ಗಂಭೀರ್ ಭದ್ರಪಡಿಸಿಕೊಂಡಿದ್ದಾರೆ. ಜತೆಗೆ ತನ್ನ ಹುದ್ದೆಯ ‘ಪ್ರೊಬೇಷನರಿ’ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಭವಿಷ್ಯದ ಸವಾಲುಗಳು ಅವರಿಗೆ ಇನ್ನಷ್ಟು ಕಠಿಣ ಅಗ್ನಿಪರೀಕ್ಷೆಗಳನ್ನು ಒಡ್ಡಲಿವೆ.
ರಾಹುಲ್ ದ್ರಾವಿಡ್ ಪದತ್ಯಾಗದ ಬಳಿಕ ಭಾರತ ತಂಡದ ತರಬೇತುದಾರ ಪಟ್ಟಕ್ಕೇರಿದ ಎಂಟು ತಿಂಗಳ ಅವಧಿಯಲ್ಲಿ ತವರು ಹಾಗೂ ವಿದೇಶಿ ನೆಲದಲ್ಲಿನ ಟೆಸ್ಟ್ ಸರಣಿ ಸೋಲುಗಳು ಕೋಚ್ ಬದಲಾವಣೆ ಕೂಗಿಗೆ ಧ್ವನಿ ನೀಡಿದ್ದವು. ಇದ್ಯಾವುದಕ್ಕೂ ಜಗ್ಗದ ‘ಗುರು ಗಂಭೀರ್’ ತನ್ನ ನಿಖರ ಕಾರ್ಯತಂತ್ರದೊಂದಿಗೆ 12 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಒಲಿಸಿಕೊಳ್ಳಲು ರೋಹಿತ್ ಶರ್ಮ ಪಡೆಗೆ ಮಾರ್ಗದರ್ಶನ ನೀಡಿದರು. ಪ್ರಶಸ್ತಿ ಗೆದ್ದಾಗಲೂ ಹೆಚ್ಚು ಬೀಗದೆ ಹೆಸರಿಗೆ ತಕ್ಕಂತೆ ಗಂಭೀರ ವರ್ತನೆ ತೋರಿ ಟೀಕಾಕಾರರಿಂದಲೂ ಭೇಷ್ ಎನಿಸಿಕೊಂಡರು. ಆದರೆ ಸ್ಥಿತ್ಯಂತರ ತಂಡದಲ್ಲಿ ಅನುಭವಿ ಆಟಗಾರರ ಸಮರ್ಥ ಬಳಕೆ ಜತೆಗೆ ಯುವ ಆಟಗಾರರಿಗೆ ಸೂಕ್ತ ಅವಕಾಶ ಕಲ್ಪಿಸುವ ಸವಾಲು ಹೊಂದಿರುವ ಗಂಭೀರ್, ಮುಂದಿನ ಎರಡು ವರ್ಷಗಳ ಅಂತರದಲ್ಲಿ ಐಸಿಸಿ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ.
ಟೆಸ್ಟ್ ಅಗ್ರ ಕ್ರಮಾಂಕ ನಿರ್ಧಾರ!
ದ್ರಾವಿಡ್ ಉತ್ತರಾಧಿಕಾರಿಯಾಗಿ ಮೊದಲ ಐಸಿಸಿ ಟೂರ್ನಿಯಲ್ಲಿ ಗೆದ್ದು ಬೀಗಿರುವ ಗಂಭೀರ್‌ಗೆ ಸದ್ಯ ಎರಡು ತಿಂಗಳ ರೆಸ್ಟ್. ಆದರೆ ಐಪಿಎಲ್ ಬಳಿಕ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಿಂದ ವಿಭಿನ್ನ ಸವಾಲು ಎದುರಿಸಲಿರುವ ಗಂಭೀರ್ ಹಾಗೂ ತರಬೇತಿ ಬಳಗ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) 4ನೇ ಆವೃತ್ತಿಗೆ ಬಲಿಷ್ಠ ತಂಡ ಕಟ್ಟುವ ಕಾರ್ಯಯೋಜನೆ ರೂಪಿಸಬೇಕಿದೆ. ಇತ್ತೀಚಿನ ಟೆಸ್ಟ್ ಸರಣಿಗಳಲ್ಲಿ ಕಳಪೆ ನಿರ್ವಹಣೆಯ ನಡುವೆಯೂ ರೋಹಿತ್ ತಂಡದಲ್ಲಿ ಮುಂದುವರಿದರೆ ಭಾರತದ ಅಗ್ರ ಕ್ರಮಾಂಕದಲ್ಲಿ ಕನ್ನಡಿಗ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್ ಹಾಗೂ ಶುಭಮಾನ್ ಗಿಲ್ ಸ್ಥಾನ ನಿರ್ಧರಿಸುವುದು ಸವಾಲಿನಿಂದ ಕೂಡಿದೆ.
ಜತೆಗೆ ಮೂವರು ವೇಗಿಗಳಾದ ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ ಹಾಗೂ ಮೊಹಮದ್ ಸಿರಾಜ್ ಒಳಗೊಂಡ ಬೌಲಿಂಗ್ ವಿಭಾಗ ರೂಪಿಸಬೇಕಿದೆ. ಸೀಮಿತ ಓವರ್‌ಗಳ ಸರಣಿಯಲ್ಲಿ ತಂಡದ ‘ಸೈಲೆಂಟ್ ಹೀರೋ’ ಎನಿಸಿರುವ ಶ್ರೇಯಸ್ ಅಯ್ಯರ್ ಟೆಸ್ಟ್ ತಂಡಕ್ಕೆ ಮರಳುವರೇ ಎಂಬುದು ಕುತೂಹಲ ಮೂಡಿಸಿದರೆ, ದೇಶೀಯ ಕ್ರಿಕೆಟ್‌ನಲ್ಲಿ ರನ್‌ಮಳೆ ಹರಿಸುತ್ತಿರುವ ಕನ್ನಡಿಗ ಕರುಣ್ ನಾಯರ್‌ಗೂ ಮತ್ತೊಂದು ಅವಕಾಶ ನೀಡುವರೇ ಎಂದು ಕಾದುನೋಡಬೇಕಿದೆ.
ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು
ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ಕಠಿಣ ಪರೀಕ್ಷೆ ಎದುರಿಸಲಿದೆ. ರೋಹಿತ್, ಕೊಹ್ಲಿ ಹಾಗೂ ಜಡೇಜಾ ನಿವೃತ್ತಿಯ ಬಳಿಕ ಸೂರ್ಯಕುಮಾರ್ ಸಾರಥ್ಯದಲ್ಲಿ ನಿರ್ಭೀತಿಯ ಯುವ ಆಟಗಾರರ ತಂಡ ರೂಪುಗೊಂಡಿದ್ದು, ಚುಟುಕು ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯದ ಆರಂಭ ಎನಿಸಿದೆ. ವರುಣ್ ಚಕ್ರವರ್ತಿ ಹಾಗೂ ಜಸ್‌ಪ್ರೀತ್ ಬುಮ್ರಾ ಇದುವರೆಗೆ ಒಟ್ಟಾಗಿ ತಂಡದಲ್ಲಿ ಆಡಿಲ್ಲ.
ಜತೆಗೆ ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಆಯ್ಕೆ ಕಗ್ಗಂಟ್ಟಾಗಿದೆ. ಅಭಿಷೇಕ್ ಶರ್ಮ- ಯಶಸ್ವಿ ಜೈಸ್ವಾಲ್ ನಡುವಿನ ಆರಂಭಿಕರ ಗೊಂದಲವೂ ಸರಿದೂಗಿಸಬೇಕಿದೆ. ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ ಮೂವರು ವೇಗದ ಆಲ್ರೌಂಡರ್ಸ್ ಜತೆಗೆ ಸೂರ್ಯ, ಅಕ್ಷರ್ ಪಟೇಲ್ ಅನುಭವಿ ಆಟಗಾರರೆನಿಸಿದ್ದಾರೆ.
ಹೊಸ ನಾಯಕನ ಆಯ್ಕೆ...
ಮೂರು ಮಾದರಿಗೂ ಪ್ರತ್ಯೇಕ ತಂಡ ರಚಿಸಿರುವ ಗಂಭೀರ್‌ಗೆ 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನೈಜ ಸವಾಲು. ವೇಗಿಗಳಿಗೆ ಹೆಚ್ಚಿನ ನೆರವು ಒದಗಿಸುವ ಹರಿಣಗಳ ನಾಡಿನಲ್ಲಿ ಈಗಿನ ನಾಲ್ವರು ಸ್ಪಿನ್ನರ್‌ಗಳ ಕಾರ್ಯತಂತ್ರ ಲಿಸುವುದು ಕಷ್ಟ. ಸದ್ಯಕ್ಕೆ ರೋಹಿತ್, ಕೊಹ್ಲಿ ಹಾಗೂ ಜಡೇಜಾ ನಿವೃತ್ತಿಯಿಂದ ದೂರವುಳಿದರೂ, ಮುಂದಿನ ದಿನಗಳಲ್ಲಿ ಫಿಟ್ನೆಸ್ ಜತೆಗೆ ಲಯ ಕಾಯ್ದುಕೊಳ್ಳಬೇಕಿದೆ. ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ವಿರೋಧಿಸುವ ಗಂಭೀರ್ ಮತ್ತೆ ತನ್ನ ಬೋಲ್ಡ್ ನಿರ್ಧಾರಗಳೊಂದಿಗೆ 27 ಪಂದ್ಯಗಳಲ್ಲಿ ವಿಶ್ವಕಪ್ ತಂಡ ಕಟ್ಟಬೇಕಿದೆ. ಇದರ ಜತೆಗೆ ಹೊಸ ನಾಯಕನನ್ನು ಗುರುತಿಸುವ ಜವಾಬ್ದಾರಿಯೂ ಇದ್ದು, ಸದ್ಯ ಶುಭಮಾನ್ ಗಿಲ್ ಉಪನಾಯಕ ಎನಿಸಿದರೂ, ಹಾರ್ದಿಕ್ ಪಾಂಡ್ಯ ಪೈಪೋಟಿ ನೀಡಲಿದ್ದಾರೆ. ಹಾರ್ದಿಕ್ ಈಗಾಗಲೆ ಐಪಿಎಲ್‌ನಲ್ಲಿ ನಾಯಕತ್ವ ಗುಣವನ್ನು ಸಾಬೀತುಪಡಿಸಿದ್ದಾರೆ.