VIDEO | ಲಂಕಾ ಕ್ರಿಕೆಟಿಗ ಕುಸಲ್​ ಮೆಂಡಿಸ್​ ಆಕ್ಸಿಡೆಂಟ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ

kusal axi
Published on

ಕೊಲಂಬೊ: ವೃದ್ಧ ಸೈಕ್ಲಿಸ್ಟ್​​ಗೆ ಕಾರು ಡಿಕ್ಕಿ ಹೊಡೆಸಿ ಸಾವಿಗೆ ಕಾರಣವಾದ ಆರೋಪದಲ್ಲಿ ಶ್ರೀಲಂಕಾದ ಕ್ರಿಕೆಟಿಗ ಕುಸಲ್​ ಮೆಂಡಿಸ್​ ಈಗಾಗಲೆ ಬಂಧನಕ್ಕೊಳಗಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯ ಈಗ ಮಾಧ್ಯಮಗಳ ಮೂಲಕ ಬಹಿರಂಗಗೊಂಡಿದೆ.

ಭಾನುವಾರ ಬೆಳಗ್ಗೆ 5 ಗಂಟೆಯ ವೇಳೆಗೆ ಪನದುರದ ಹೊರೆಥುದುವ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಸಿಸಿಟಿವಿ ದೃಶ್ಯಗಳು ತೋರಿಸುತ್ತಿದೆ. 64 ವರ್ಷದ ಸೈಕ್ಲಿಸ್ಟ್​ಗೆ 25 ವರ್ಷದ ಕ್ರಿಕೆಟಿಗ ಕುಸಲ್​ ಮೆಂಡಿಸ್​ ಕಾರು ಡಿಕ್ಕಿ ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಸೈಕಲ್​ಗೆ ಸಂಪೂರ್ಣವಾಗಿ ಹಾನಿಯಾಗಿದ್ದರೆ, ಕುಸಲ್​ ಕಾರಿಗೂ ಡ್ಯಾಮೇಜ್​ಗಳಾಗಿವೆ.

ಶ್ರೀಲಂಕಾದ ಪತ್ರಿಕೆ ಡೈಲಿ ಮಿರರ್​ನ ಟ್ವಿಟರ್​ ಖಾತೆಯಲ್ಲಿ ಅಪಘಾತದ ಸಿಸಿಟಿವಿ ದ್ಯಶ್ಯವನ್ನು ಪ್ರಕಟಿಸಲಾಗಿದ್ದು, ವೇಗವಾಗಿ ಚಲಿಸಿದ ಕಾರು ಮುಂಜಾನೆಯ ಕತ್ತಲೆಯಲ್ಲಿ ಸೈಕ್ಲಿಸ್ಟ್​ಗೆ ರಭಸದಿಂದ ಗುದ್ದಿರುವುದು ಕಾಣಿಸಿದೆ. ಕಾರು ಚಲಾಯಿಸುತ್ತಿದ್ದ ವೇಳೆ ಕುಸಲ್​ ಮದ್ಯಪಾನ ಸೇವನೆ ಮಾಡಿದ್ದರೇ ಎಂಬ ಬಗ್ಗೆ ಪರೀಕ್ಷೆ ನಡೆದಿದೆ. ಲಂಕಾ ತಂಡದ ರೆಸಿಡೆನ್ಶಿಯಲ್​ ತರಬೇತಿ ಶಿಬಿರದಲ್ಲಿ ಕುಸಲ್​ ಪಾಲ್ಗೊಂಡಿದ್ದರು. ಪಲ್ಲೆಕಿಲೆಯಲ್ಲಿ ನಡೆದ ಶಿಬಿರ ಕಳೆದ ಬುಧವಾರ ಮುಕ್ತಾಯಗೊಂಡಿತ್ತು. ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ಕುಸಲ್​ ಲಂಕಾ ಪರ 44 ಟೆಸ್ಟ್​, 76 ಏಕದಿನ ಮತ್ತು 26 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಕುಸಲ್​ ಮೆಂಡಿಸ್​ಗೆ ಜಾಮೀನು

ಕಾರು ಅಪಘಾತ ಪ್ರಕರಣದಲ್ಲಿ ಕುಸಲ್​ ಮೆಂಡಿಸ್​ಗೆ ಸೋಮವಾರ ಜಾಮೀನು ದೊರೆತಿದೆ. 1 ದಶಲಕ್ಷ ಶ್ರೀಲಂಕಾ ರೂಪಾಯಿ ಮೌಲ್ಯದ ಎರಡು ಶೂರಿಟಿಯ ಮೇರೆಗೆ ಪನದುರ ಮ್ಯಾಜಿಸ್ಟ್ರೇಟ್​ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಅವರನ್ನು ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net