ಜಿಂಬಾಬ್ವೆಯ ಟಿ10 ಲೀಗ್​ನಲ್ಲಿ ಯೂಸುಫ್​ ಪಠಾಣ್​, ರಾಬಿನ್​ ಉತ್ತಪ್ಪ ಸ್ಫೋಟಕ ಬ್ಯಾಟಿಂಗ್​

batting web
Published on

ಹರಾರೆ: ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ಆಲ್ರೌಂಡರ್​ ಯೂಸುಫ್​ ಪಠಾಣ್​ (80*ರನ್​, 26 ಎಸೆತ, 5 ಬೌಂಡರಿ, 8 ಸಿಕ್ಸರ್​) ಮತ್ತು ಕನ್ನಡಿಗ ರಾಬಿನ್​ ಉತ್ತಪ್ಪ (88*ರನ್​, 36 ಎಸೆತ, 8 ಬೌಂಡರಿ, 6 ಸಿಕ್ಸರ್​) ಜಿಂಬಾಬ್ವೆಯ ಜಿಮ್​ ಆಫ್ರೋ ಟಿ10 ಕ್ರಿಕೆಟ್​ ಲೀಗ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶಿಸುವ ಮೂಲಕ ತಮ್ಮ ತಂಡಗಳ ಗೆಲುವಿನ ರೂವರಿಗಳಾಗಿ ಹೊರಹೊಮ್ಮಿದ್ದಾರೆ.

ಶುಕ್ರವಾರ ನಡೆದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಡರ್ಬಜ್​ ಖಲಂದರ್ಸ್​ ವಿರುದ್ಧ 6 ವಿಕೆಟ್​ಗಳಿಂದ ಗೆಲುವು ದಾಖಲಿಸುವ ಮೂಲಕ ಜೊಹಾನ್ಸ್​ರ್ಬಗ್​ ಬಫಾಲೋಸ್ ಫೈನಲ್​ ಪ್ರವೇಶಿಸಿತು. ಮೊದಲು ಬ್ಯಾಟಿಂಗ್​ ಮಾಡಿದ ಡರ್ಬನ್​ ತಂಡ 10 ಓವರ್​ಗಳಲ್ಲಿ 4 ವಿಕೆಟ್​ಗೆ 140 ರನ್​ ಪೇರಿಸಿತು. ಪ್ರತಿಯಾಗಿ ಯೂಸುಫ್​ ಪಠಾಣ್​ ಆರ್ಭಟದಿಂದ ಜೊಹಾನ್ಸ್​ರ್ಬಗ್​ ತಂಡ 9.5 ಓವರ್​ಗಳಲ್ಲಿ 4 ವಿಕೆಟ್​ಗೆ 142 ರನ್​ ಪೇರಿಸಿ ಜಯಿಸಿತು. ಕೊನೇ 3 ಓವರ್​ಗಳಲ್ಲಿ ಗೆಲುವಿಗೆ 64 ರನ್​ ಬೇಕಿದ್ದಾಗ ಯೂಸುಫ್​ ಪಠಾಣ್​ ಗರ್ಜಿಸಿದರು. ಮೊಹಮದ್​ ಆಮೀರ್​ ಎಸೆದ ಇನಿಂಗ್ಸ್​ನ 8ನೇ ಓವರ್​ನಲ್ಲಿ 3 ಸಿಕ್ಸರ್​, 1 ಬೌಂಡರಿ ಸಹಿತ 25 ರನ್​ ಕಸಿದರು. 9ನೇ ಓವರ್​ನಲ್ಲಿ ಮತ್ತೆ 19 ರನ್​ ಸಿಡಿಸಿದರು. ಕೊನೇ ಓವರ್​ನಲ್ಲಿ 20 ರನ್​ ಬೇಕಿದ್ದಾಗ 2 ಬೌಂಡರಿ, 2 ಸಿಕ್ಸರ್​ ಸಿಡಿಸಿ ಇನ್ನೊಂದು ಎಸೆತ ಬಾಕಿ ಇರುವಂತೆಯೇ 42 ವರ್ಷದ ಯೂಸುಫ್​ ಪಠಾಣ್​ ಗೆಲುವು ತಂದರು.

ಎಲಿಮಿನೇಟರ್​ ಕಾದಾಟವಾಗಿದ್ದ ದಿನದ 2ನೇ ಪಂದ್ಯದಲ್ಲಿ ಹರಾರೆ ಹರಿಕೇನ್ಸ್​ ತಂಡ ನಾಯಕ ರಾಬಿನ್​ ಉತ್ತಪ್ಪ ಅಬ್ಬರದಿಂದ ಕೇಪ್​ಟೌನ್​ ಸ್ಯಾಂಪ್​ ಆರ್ಮಿ ಎದುರು 9 ವಿಕೆಟ್​ಗಳಿಂದ ಗೆದ್ದು 2ನೇ ಕ್ವಾಲಿಫೈಯರ್​ ಪ್ರವೇಶಿಸಿತು. ಮೊದಲು ಬ್ಯಾಟಿಂಗ್​ ಮಾಡಿದ ಕೇಪ್​ಟೌನ್​ 3 ವಿಕೆಟ್​ಗೆ 145 ರನ್​ ಪೇರಿಸಿತು. ಪ್ರತಿಯಾಗಿ ಹರಾರೆ ಹರಿಕೇನ್ಸ್​ ತಂಡ, ಆರಂಭಿಕನಾಗಿ ಕಣಕ್ಕಿಳಿದು ನಾಯಕನಾಟ ಆಡಿದ ಉತ್ತಪ್ಪ ಸಾಹಸದಿಂದ 9.2 ಓವರ್​ಗಳಲ್ಲೇ 1 ವಿಕೆಟ್​ಗೆ 146 ರನ್​ ಪೇರಿಸಿ ಜಯಿಸಿತು. ಉತ್ತಪ್ಪಗೆ ಡೋನೊವನ್​ ಫೆರೇರಾ (35*ರನ್​, 16 ಎಸೆತ, 1 ಬೌಂಡರಿ, 4 ಸಿಕ್ಸರ್​) ಭರ್ಜರಿ ಸಾಥ್​ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net