ಪ್ರೊ ಕಬಡ್ಡಿ ಲೀಗ್​ನಲ್ಲಿ ಜೈಪುರ ಪಿಂಕ್​ಪ್ಯಾಂಥರ್ಸ್​​ಗೆ ರೋಚಕ ಜಯ; ಗುಜರಾತ್​ಗೆ ಮಣಿದ ಯುಪಿ

pro web
Published on

ಚೆನ್ನೈ: ಸರ್ವಾಂಗೀಣ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್​ ಜೈಪುರ ಪಿಂಕ್​ಪ್ಯಾಂಥರ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಆತಿಥೇಯ ತಮಿಳ್​ ತಲೈವಾಸ್​ ವಿರುದ್ಧ 25-24 ಅಂಕಗಳಿಂದ ರೋಚಕ ಗೆಲುವಿನ ದಾಖಲಿಸಿದೆ.

ಎಸ್​ಡಿಎಟಿ ಮಲ್ಟಿ ಪರ್ಪಸ್​ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೆ$ ಚರಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಜೈಪುರ ತಂಡ ಮೊದಲಾರ್ಧದಲ್ಲಿ 10-16ರಿಂದ ಹಿನ್ನಡೆ ಕಂಡಿತು. ಬಳಿಕ ದ್ವೀತಿಯಾರ್ಧದಲ್ಲಿ ರೈಡಿಂಗ್​-ಟ್ಯಾಕಲಿಂಗ್​ನಲ್ಲಿ ದಿಟ್ಟ ತಿರುಗೇಟು ನೀಡಿ ಕೊನೇಕ್ಷಣದಲ್ಲಿ ಗೆಲುವು ಒಲಿಸಿಕೊಂಡಿತು.

ಜೈಪುರ ಪರ ರೈಡಿಂಗ್​ನಲ್ಲಿ ಅರ್ಜುನ್​ ದೇಸ್ವಾಲ್​ (7 ಅಂಕ) ಮತ್ತು ಟ್ಯಾಕಲಿಂಗ್​ನಲ್ಲಿ ರೆಜಾ ಮಿರ್ಬರಿ (5), ನಾಯಕ ಸುನೀಲ್​ ಕುಮಾರ್​ (4) ಮಿಂಚಿದರು. ತವರಿನಲ್ಲಿ ಸತತ 2ನೇ ಸೋಲು ಕಂಡ ತಲೈವಾಸ್​ ಪರ ರೈಡರ್​ ಹಿಮಾಂಶು ನರ್ವಾಲ್​ (8) ಹೋರಾಟ ವ್ಯರ್ಥವೆನಿಸಿತು.

ಗುಜರಾತ್​ಗೆ ಜಯ: ರಾಕೇಶ್​ (14) ಅವರ 13 ಯಶಸ್ವಿ ರೈಡಿಂಗ್​ಗಳ ಬಲದಿಂದ ಗುಜರಾತ್​ ಜೈಂಟ್ಸ್​ ತಂಡ ದಿನದ 2ನೇ ಪಂದ್ಯದಲ್ಲಿ ಯುಪಿ ಯೋಧಾಸ್​ ಎದುರು 38-30ರಿಂದ ಗೆಲುವು ದಾಖಲಿಸಿತು. ಮೊದಲಾರ್ಧದಲ್ಲಿ ಯುಪಿ 19-14ರಿಂದ ಮುನ್ನಡೆ ಸಾಧಿಸಿದ್ದರೆ, ದ್ವೀತಿಯಾರ್ಧದಲ್ಲಿ ಯುಪಿ ತಂಡವನ್ನು 2 ಬಾರಿ ಆಲೌಟ್​ ಮಾಡುವ ಮೂಲಕ ಗುಜರಾತ್​ ತಿರುಗೇಟು ನೀಡಿತು. ಯುಪಿ ಪರ ಸುರೇಂದರ್​ ಗಿಲ್​ (13) ಹೋರಾಟ ವ್ಯರ್ಥಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net