ತ್ರಿವರ್ಣ ಧ್ವಜದ ಮೇಲೆ ಸಹಿ ಹಾಕುವುದಿಲ್ಲ ಎಂದ ನೀರಜ್​ ಚೋಪ್ರಾ; ಚಿನ್ನದ ಹುಡುಗನ ಪ್ರತಿಕ್ರಿಯೆಗೆ ಫ್ಯಾನ್ಸ್ ಫಿದಾ!

Untitled design (90)
Published on

ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಮತ್ತೊಮ್ಮೆ ಐತಿಹಾಸಿಕ ಸಾಧನೆಗೈದ ನೀರಜ್​ ಚೋಪ್ರಾ ಅವರಿಗೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆಗಳು ಹರಿದುಬರುತ್ತಿವೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರೊಬ್ಬರು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು. ತಮ್ಮ ಭರ್ಜರಿ ಗೆಲುವಿನ ಬೆನ್ನಲ್ಲೇ ಅಭಿಮಾನಿಯೊಬ್ಬರು ಭಾರತೀಯ ಧ್ವಜದ ಮೇಲೆ ನಿಮ್ಮ ಸಹಿ ಬೇಕು ಎಂದು ಕೇಳಿದ್ದಕ್ಕೆ, ನೀರಜ್​ ಕೊಟ್ಟ ಉತ್ತರ ಇದೀಗ ಅನೇಕರ ಪ್ರಶಂಸೆಗೆ ಪಾತ್ರವಾಗಿದೆ.

ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಹಂಗೇರಿಯ ಅಭಿಮಾನಿಯೊಬ್ಬರು ನೀರಜ್​ ಚೋಪ್ರಾ ಅವರನ್ನು ಸಂಪರ್ಕಿಸಿ, ಭಾರತೀಯ ಧ್ವಜಕ್ಕೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಚಿನ್ನದ ಹುಡುಗ, "ಇದು ನನ್ನ ಫ್ಲ್ಯಾಗ್ ಕೋಡ್‌ನ ಉಲ್ಲಂಘನೆಯಾಗಿದೆ" ಎಂದು ಹೇಳಿರುವ ಬಗ್ಗೆ ರೋಶನ್ ರೈ ಅವರು ತಮ್ಮ ಎಕ್ಸ್ (ಈ ಹಿಂದೆ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅಭಿಮಾನಿ ಧರಿಸಿದ್ದ ಟಿ-ಶರ್ಟ್​ ಮೇಲೆ ನೀರಜ್​ ಸಹಿ ಹಾಕುವ ಮುಖೇನ ಅವರನ್ನು ಸಂತಸಪಡಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಅನೇಕರು ನೀರಜ್​ ಚೋಪ್ರಾ ಅವರ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net