ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್​ ಸರಣಿ ಗೆದ್ದ ಮೊದಲ ಭಾರತೀಯ ನಾಯಕರೆನಿಸುವರೇ ರೋಹಿತ್?

rohit web
Published on

ಸೆಂಚುರಿಯನ್​: ಏಕದಿನ ವಿಶ್ವಕಪ್​ ಗೆದ್ದ ಕಪಿಲ್​ ದೇವ್​, ಎಂಎಸ್​ ಧೋನಿ ಸಾಲಿಗೆ ಸೇರುವ ಅವಕಾಶದಿಂದ ಸ್ವಲ್ಪದರಲ್ಲಿ ವಂಚಿತರಾದ ರೋಹಿತ್​ ಶರ್ಮ, ದ. ಆಫ್ರಿಕಾದಲ್ಲಿ ಟೆಸ್ಟ್​ ಸರಣಿ ಗೆದ್ದ ಮೊದಲ ಭಾರತೀಯ ನಾಯಕರೆಂಬ ಇತಿಹಾಸ ಬರೆಯುವ ಹಂಬಲದಲ್ಲಿದ್ದಾರೆ. ಅಜರುದ್ದೀನ್​ (1992), ಸಚಿನ್​ ತೆಂಡುಲ್ಕರ್​ (1996), ಸೌರವ್​ ಗಂಗೂಲಿ (2001), ರಾಹುಲ್​ ದ್ರಾವಿಡ್​ (2006-07), ಎಂಎಸ್​ ಧೋನಿ (2010-11), ವಿರಾಟ್​ ಕೊಹ್ಲಿ (2018-19, 2021-22) ನಾಯಕತ್ವದಲ್ಲಿ ಸಾಧ್ಯವಾಗದ್ದನ್ನು ರೋಹಿತ್​ ಶರ್ಮ ಸಾರಥ್ಯದಲ್ಲಿ ಸಾಧಿಸುವ ಛಲ ಭಾರತ ತಂಡದ್ದಾಗಿದೆ.

ಹರಿಣಗಳ ನಾಡಿನಲ್ಲಿ ಭಾರತ ಇದುವರೆಗೆ ಆಡಿರುವ 8 ಟೆಸ್ಟ್​ ಸರಣಿಗಳಲ್ಲಿ 7ರಲ್ಲಿ ಸೋತಿದ್ದು, 2010-11ರಲ್ಲಿ ಏಕೈಕ ಬಾರಿ ಎಂಎಸ್​ ಧೋನಿ ಸಾರಥ್ಯದಲ್ಲಿ ಆಡಿದಾಗ 1-1ರಿಂದ ಸರಣಿ ಸಮಬಲ ಸಾಧಿಸಿದ್ದೇ ಇದುವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ.

ವಿಶ್ವಕಪ್​ ಫೈನಲ್​ ಸೋಲಿನ ನೋವಿಗೆ ದ. ಆಫ್ರಿಕಾದಲ್ಲಿನ ಟೆಸ್ಟ್​ ಸರಣಿ ಗೆಲುವು ಮುಲಾಮು ಆಗಬಹುದೇ ಎಂಬುದು ಗೊತ್ತಿಲ್ಲ. ಯಾಕೆಂದರೆ ವಿಶ್ವಕಪ್​ ಯಾವತ್ತಿದ್ದರೂ ವಿಶ್ವಕಪ್​. ಆದರೆ ದ. ಆಫ್ರಿಕಾದಲ್ಲಿ ಆಡುವುದು ಯಾವಾಗಲೂ ಸವಾಲು. ಇದು ಬ್ಯಾಟಿಂಗ್​ಗೆ ಅತ್ಯಂತ ಕಠಿಣವಾದ ತಾಣ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಪಂದ್ಯಕ್ಕೆ ಮುನ್ನಾದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net