

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ನಡೆಯುತ್ತಿದೆ. ಭಾರತ ಈಗಾಗಲೇ 2 ಗೆಲುವು ದಾಖಲಿಸಿಕೊಂಡು ಗ್ರೂಪ್ 'ಬಿ' ಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಪಾಕಿಸ್ತಾನ ಹಾಗೂ ನೆದರ್ಲೆಂಡ್ ವಿರುದ್ಧ ಗೆಲುವು ದಾಖಲಿಸಿ ಪ್ರಶಸ್ತಿ ಗೆಲ್ಲುವ ರೇಸ್ನಲ್ಲಿ ಮುಂದಿದೆ.
ತಂಡದ ಎಲ್ಲರೂ ಸಂಘಟಿತ ಪ್ರದರ್ಶನ ನೀಡುತ್ತಿದ್ದರು, ಟೀಂ ಮ್ಯಾನೇಜ್ಮೆಂಟ್ಗೆ ಚಿಂತೆಯಾಗಿರುವುದು ಉಪ ನಾಯಕ ಕೆ.ಎಲ್. ರಾಹುಲ್ ಬ್ಯಾಟಿಂಗ್ ವೈಫಲ್ಯ. ಹೌದು, ವಿಶ್ವಕಪ್ನಲ್ಲಿ ಆರಂಭಿಕನಾಗಿ ಮೈದಾನಕ್ಕಿಳಿಯುವ ರಾಹುಲ್ ಕ್ರಿಸ್ ಕಚ್ಚಿ ನಿಲ್ಲುವಲ್ಲಿ ವಿಫಲರಾಗುತ್ತಿದ್ದಾರೆ. ಪಾಕಿಸ್ತಾನ (4) ಹಾಗೂ ನೆದರ್ಲೆಂಡ್ (9) ವಿರುದ್ಧ ಎರಡಂಕಿಯ ರನ್ ಕಲೆ ಹಾಕಲು ರಾಹುಲ್ಗೆ ಸಾಧ್ಯವಾಗಿಲ್ಲ.
ರಾಹುಲ್ ವೈಫಲ್ಯ ಅನುಭವಿಸುತ್ತಿದ್ದಂತೆ ಸೌತ್ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಬೇಕು ಎಂಬ ಮಾತು ಬರುತ್ತಿದೆ. ದಿನೇಶ್ ಕಾರ್ತಿಕ್ ಕಂಬ್ಯಾಕ್ನಿಂದಾಗಿ ರಿಷಬ್ ಪಂತ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳುತ್ತಲೇ ಬರುತ್ತಿದ್ದಾರೆ. ಇದೀಗ ರಾಹುಲ್ ಹೊರಗಿಟ್ಟು ಪಂತ್ ತಂಡಕ್ಕೆ ಸೇರ್ಪಡೆಗೊಳ್ಳಬೇಕು ಎಂಬ ಕೂಗು ಕೇಳಿಸುತ್ತಿದ್ದು, ಮ್ಯಾನೇಜ್ಮೆಂಟ್ ಲೆಕ್ಕಾಚಾರ ಏನು ಎಂಬುವುದು ಮಾತ್ರ ರಹಸ್ಯವಾಗಿದೆ.
ಇದೀಗ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಪ್ರತಿಕ್ರಿಯಿಸಿದ್ದು, ಕೆ.ಎಲ್. ರಾಹುಲ್ ಬ್ಯಾಟಿಂಗ್ ವೈಫಲ್ಯದ ಬಗ್ಗೆ ನಾವು ಏನನ್ನೂ ಯೋಚಿಸಿಲ್ಲ. ರಾಹುಲ್ ಬ್ಯಾಟಿಂಗ್ ಸಾಮರ್ಥ್ಯ ಅದ್ಭುತವಾಗಿದೆ. ಕೇವಲ ಎರಡು ಪಂದ್ಯದಿಂದ ಬ್ಯಾಟಿಂಗ್ ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ. ಅಭ್ಯಾಸದ ವೇಳೆ ರಾಹುಲ್ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)