

ನವದೆಹಲಿ: ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯಬೇಕಾಗಿರುವ ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮ, ಗೆಳತಿಗೆ ಕರೆ ಮಾಡಿ ಅತ್ತ ಬಗ್ಗೆ ಹೇಳಿಕೊಂಡಿದ್ದಾರೆ. ಪಂದ್ಯವೊಂದರಲ್ಲಿ ಭಾರಿ ದಂಡನೆಗೊಳಗಾದ ಬಳಿಕ ಹತಾಶರಾಗಿದ್ದ ಇಶಾಂತ್ ಶರ್ಮ, ಆ ಘಟನೆ ತಮ್ಮ ಜೀವನದ ಟರ್ನಿಂಗ್ ಪಾಯಿಂಟ್ ಎಂದೂ ಹೇಳಿಕೊಂಡಿದ್ದಾರೆ.
2013ರಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಇಶಾಂತ್ ಶರ್ಮ ಭಾರಿ ದುಬಾರಿ ಎನಿಸಿದ್ದರು. ಆಸೀಸ್ ಆಲ್ರೌಂಡರ್ ಜೇಮ್ಸ್ ಫೌಲ್ಕ್‌ನರ್ ಈ ಪಂದ್ಯದಲ್ಲಿ 29 ಎಸೆತಗಳಲ್ಲಿ 64 ರನ್ ಸಿಡಿಸಿ ಭಾರತದ ಕೈಯಿಂದ ಗೆಲುವು ಕಸಿದುಕೊಂಡಿದ್ದರು. ಈ ವೇಳೆ ಇನಿಂಗ್ಸ್‌ನ 48ನೇ ಓವರ್ ಎಸೆದಿದ್ದ ದೆಹಲಿ ವೇಗಿ ಇಶಾಂತ್ ಶರ್ಮ ಬರೋಬ್ಬರಿ 30 ರನ್ ಬಿಟ್ಟುಕೊಟ್ಟಿದ್ದರು. ಆ ಓವರ್‌ಗೆ ಮುನ್ನ 18 ಎಸೆತಗಳಲ್ಲಿ 44 ರನ್ ಗಳಿಸುವ ಕಠಿಣ ಸವಾಲು ಎದುರಿಸುತ್ತಿದ್ದ ಆಸೀಸ್ ತಂಡ ಬಳಿಕ ಸುಲಭವಾಗಿ ಗೆಲುವು ಒಲಿಸಿಕೊಂಡಿತ್ತು. ಜೇಮ್ಸ್ ಫೌಲ್ಕ್‌ನರ್‌ಗೆ ಇಶಾಂತ್ ಆ ಓವರ್‌ನಲ್ಲಿ 4 ಸಿಕ್ಸರ್ ಬಿಟ್ಟುಕೊಟ್ಟಿದ್ದರು.
ಇದೀಗ ಆ ಕಹಿ ಪಂದ್ಯವನ್ನು ನೆನಪಿಸಿಕೊಂಡಿರುವ ಇಶಾಂತ್ ಶರ್ಮ, ‘2013ರ ಆ ಪಂದ್ಯ ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಫೌಲ್ಕ್‌ನರ್ ನನ್ನ ಒಂದೇ ಓವರ್‌ನಲ್ಲಿ 30 ರನ್ ಕಸಿದಿದ್ದರು. ಇದರಿಂದ ನಾನು ದೇಶಕ್ಕೆ ದ್ರೋಹ ಬಗೆದಷ್ಟು ಬೇಸರ ಎದುರಿಸಿದ್ದೆ. ಬಳಿಕ 2-3 ವಾರಗಳ ಕಾಲ ಯಾರೊಂದಿಗೂ ಮಾತನಾಡಿರಲಿಲ್ಲ. ಸಾಕಷ್ಟು ಅತ್ತಿದ್ದೆ. ನಾನೊಬ್ಬ ಸದೃಢ ವ್ಯಕ್ತಿ. ನನಗಿಂತ ಕಠಿಣ ವ್ಯಕ್ತಿಯನ್ನು ನೋಡಿಲ್ಲ ಎಂದು ಅಮ್ಮ ಹೇಳುತ್ತಿರುತ್ತಾರೆ. ಆ ಪಂದ್ಯದ ಬಳಿಕ ನಾನು ನನ್ನ ಗೆಳತಿಗೂ ಕರೆ ಮಾಡಿದ್ದೆ ಮತ್ತು ಮಗುವಿನಂತೆ ಅತ್ತಿದ್ದೆ. ಆ ಮೂರು ವಾರಗಳು ದುಃಸ್ವಪ್ನವಾಗಿದ್ದವು. ನಾನು ತಿನ್ನುವುದನ್ನು ನಿಲ್ಲಿಸಿದ್ದೆ. ನಿದ್ದೆ ಬರುತ್ತಿರಲಿಲ್ಲ. ಬೇರೇನನ್ನೂ ಮಾಡಲು ಮನಸ್ಸಾಗುತ್ತಿರಲಿಲ್ಲ. ಟಿವಿ ನೋಡುತ್ತಿದ್ದರೆ, ಜನರು ನನ್ನನ್ನು ಟೀಕಿಸುವುದೇ ಕಾಣಿಸುತ್ತಿತ್ತು. ಅದರಿಂದ ನಾನು ಮತ್ತಷ್ಟು ಬೇಸರಗೊಳ್ಳುತ್ತಿದ್ದೆ’ ಎಂದು ಹೇಳಿಕೊಂಡಿದ್ದಾರೆ.
‘ಈಗ ಆ ಬಗ್ಗೆ ನೆನೆಸಿಕೊಂಡಾಗ ನಾನು ನಗುತ್ತೇನೆ. ಆ ಪಂದ್ಯದಿಂದ ನನಗೆ ಲಾಭವೇ ಆಯಿತು ಎಂದು ತಿಳಿದುಕೊಂಡಿದ್ದೇನೆ. ಆ ಪಂದ್ಯದ ಬಳಿಕ ನನ್ನ ಜೀವನ ಸಾಕಷ್ಟು ಬದಲಾವಣೆ ಕಂಡಿದೆ. ಆ ಬಳಿಕ ನಾನು ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಲು ಆರಂಭಿಸಿದೆ. ಅದಕ್ಕೆ ಮುನ್ನ ನಾನು ಕೆಟ್ಟ ನಿರ್ವಹಣೆ ತೋರಿದಾಗ ಜನರು ಬಂದು, ಓಕೆ ಎನ್ನುತ್ತಿದ್ದರು. ಆದರೆ 2013ರ ಬಳಿಕ ನಾನು ತಪ್ಪು ಮಾಡಿದ್ದರೆ ಅದನ್ನು ತಪ್ಪು ಎಂದೇ ಪರಿಗಣಿಸುತ್ತಿದ್ದೇನೆ. ನನ್ನ ಬೌಲಿಂಗ್ ಶೈಲಿಯ ಮೇಲೆ ಹೆಚ್ಚಿನ ಗಮನ ಇಡಲಾರಂಭಿಸಿದೆ. ಎಲ್ಲ ಪಂದ್ಯವನ್ನೂ ತಂಡಕ್ಕಾಗಿ ಗೆದ್ದುಕೊಡಲು ಆಡುವಾಗ ಇಂಥ ವಿಷಯಗಳ ಮೇಲೆ ಗಮನವಿಡುವುದು ಅಗತ್ಯ’ ಎಂದು ಇಶಾಂತ್ ವಿವರಿಸಿದ್ದಾರೆ.
ಆ ಪಂದ್ಯದ ಬಳಿಕ ಇಶಾಂತ್ ಏಕದಿನ ಕ್ರಿಕೆಟ್ ತಂಡದಿಂದ ಹೊರಬಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅಗ್ರ ಮತ್ತು ಅನುಭವಿ ವೇಗಿ ಎನಿಸಿದ್ದಾರೆ. ಇದುವರೆಗೆ ಭಾರತ ಪರ 97 ಟೆಸ್ಟ್ ಪಂದ್ಯ ಆಡಿರುವ ಇಶಾಂತ್ 297 ವಿಕೆಟ್ ಕಬಳಿಸಿದ್ದಾರೆ. 80 ಏಕದಿನ ಮತ್ತು 14 ಟಿ20 ಪಂದ್ಯಗಳಲ್ಲೂ ಅವರು ಭಾರತವನ್ನು ಪ್ರತಿನಿಧಿಸಿದ್ದು, ಕ್ರಮವಾಗಿ 115 ಮತ್ತು 8 ವಿಕೆಟ್ ಕಬಳಿಸಿದ್ದಾರೆ.
ಭಾರತ ಬಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ ಪ್ರತಿಮಾ ಸಿಂಗ್ ಅವರು ಇಶಾಂತ್ ಶರ್ಮ ಅವರ ಗೆಳತಿಯಾಗಿದ್ದರು. 2016ರ ಡಿಸೆಂಬರ್‌ನಲ್ಲಿ ಇಶಾಂತ್ ಶರ್ಮ, ಪ್ರತಿಮಾ ಅವರನ್ನು ವರಿಸಿದ್ದರು. ಪ್ರತಿಮಾ ಅವರ ಸಹೋದರಿಯರೂ ಭಾರತ ಬಾಸ್ಕೆಟ್‌ಬಾಲ್ ತಂಡದ ಆಟಗಾರ್ತಿಯರಾಗಿದ್ದರು.