

ನವದೆಹಲಿ: ಟೀಮ್ ಇಂಡಿಯಾದ ಶ್ರೇಷ್ಠ ನಾಯಕ ಯಾರು? ಎಂಬ ಪ್ರಶ್ನೆಗೆ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ನೀಡಿರುವ ಉತ್ತರ ಇದೀಗ ಭಾರಿ ವೈರಲ್ ಆಗುತ್ತಿದೆ. ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಗಳಿಸಿರುವ ಬೂಮ್ರಾ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರತಿ ಪಂದ್ಯದಲ್ಲೂ ವಿಕೆಟ್ ಕಬಳಿಸಿದ ಬುಮ್ರಾ, ರನ್ಗಳಿಗೂ ಕಡಿವಾಣ ಹಾಕಿದರು. ಎದುರಾಳಿ ತಂಡದ ಬ್ಯಾಟ್ಸ್ಮನ್ಗಳನ್ನು ಅಕ್ಷರಶಃ ಕಾಡಿದರು. ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲಲು ಬುಮ್ರಾ ಪ್ರಮುಖ ಕಾರಣ ಎಂದು ಸ್ವತಃ ವಿರಾಟ್ ಕೊಹ್ಲಿಯವರೇ ವಿಜಯೋತ್ಸವದ ಭಾಷಣದ ವೇಳೆ ಹೇಳಿದ್ದನ್ನು ಮರೆಯುವಂತಿಲ್ಲ.
ಸದ್ಯ ರೆಸ್ಟ್ ಮೂಡ್ನಲ್ಲಿರುವ ಬುಮ್ರಾ ರಾಷ್ಟ್ರೀಯ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಹಲವು ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಇಲ್ಲಿಯವರೆಗೆ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದವರಲ್ಲಿ ಶ್ರೇಷ್ಠ ನಾಯಕ ಯಾರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಬುಮ್ರಾ, ನಾನೇ ಶ್ರೇಷ್ಠ ನಾಯಕ ಎನ್ನುವ ಮೂಲಕ ಅಚ್ಚರಿಯ ಉತ್ತರ ನೀಡಿದ್ದಾರೆ.
ಅನೇಕ ಶ್ರೇಷ್ಠ ಆಟಗಾರರು ಭಾರತ ತಂಡದ ನಾಯಕರಾಗಿದ್ದಾರೆ ಮತ್ತು ಬುಮ್ರಾ ಅವರು ಶ್ರೇಷ್ಠ ನಾಯಕರ ಅಡಿಯಲ್ಲಿಯೂ ಆಡಿದ್ದಾರೆ. ಆದರೆ, ಟೀಮ್ ಇಂಡಿಯಾದ ಶ್ರೇಷ್ಠ ನಾಯಕ ಯಾರು ಎಂಬ ಪ್ರಶ್ನೆಗೆ ಬುಮ್ರಾ ಕೊಟ್ಟ ಅನಿರೀಕ್ಷಿತ ಉತ್ತರದಿಂದ ಅಭಿಮಾನಿಗಳು ಅಚ್ಚರಿಗೀಡಾಗಿದ್ದಾರೆ. ನಾನು ಕೆಲವು ಪಂದ್ಯಗಳ ನಾಯಕತ್ವ ವಹಿಸಿದ್ದರೂ ಸಹ ನಾನು ಶ್ರೇಷ್ಠ ನಾಯಕನೆಂದು ಭಾವಿಸುತ್ತೇನೆಂದು ಬುಮ್ರಾ ಹೇಳಿದ್ದಾರೆ. ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ಆಡಿದೆ. ಇದರಲ್ಲಿ ಒಂದು ಟೆಸ್ಟ್ ಮತ್ತು ಎರಡು ಟಿ20 ಪಂದ್ಯಗಳು ಸೇರಿವೆ.
ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಾಯಕತ್ವದಲ್ಲಿಯೂ ಬುಮ್ರಾ ಆಡಿದ್ದರು. ಆದರೆ, ಭಾರತದ ಶ್ರೇಷ್ಠ ನಾಯಕ ಯಾರು ಎಂಬ ಪ್ರಶ್ನೆಗೆ ಬುಮ್ರಾ ಯಾರ ಹೆಸರನ್ನು ಉಲ್ಲೇಖಿಸಲಿಲ್ಲ. ಬದಲಾಗಿ ತಮ್ಮ ಹೆಸರನ್ನೇ ಪ್ರಸ್ತಾಪಿಸಿದರು. ಅದೇನೇ ಇರಲಿ, ಧೋನಿ, ಕೊಹ್ಲಿ, ರೋಹಿತ್ ಹೆಸರು ಹೇಳದೆ ಸೇಫ್ ಸೈಡ್ನಲ್ಲಿ ಬುಮ್ರಾ ತಮ್ಮ ಹೆಸರನ್ನು ಹೇಳಿದ್ದಾರೆ. ಒಬ್ಬರ ಹೆಸರೇಳಿದರೂ ಒಬ್ಬರಿಗೂ ಮನಸ್ತಾಪ ಉಂಟಾಗಬಹುದು ಅಂತಾ ಬುಮ್ರಾ ತಮ್ಮ ಹೆಸರನ್ನೇ ಹೇಳಿದ್ದಾರೆ ಎಂದು ಕ್ರೀಡಾ ಅಭಿಮಾನಿಗಳು ತಮಾಷೆಯಾಗಿ ಹೇಳುತ್ತಿದ್ದಾರೆ. (ಏಜೆನ್ಸೀಸ್)