

ದುಬೈ: ಭಾರತದ ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಐಸಿಸಿ ಆಗಸ್ಟ್ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಹಾಲಿ ಟೆಸ್ಟ್ ಸರಣಿಯಲ್ಲಿ ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿರುವುದರಿಂದ ಅವರು ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತು ಪಾಕಿಸ್ತಾನದ ವೇಗಿ ಶಹೀನ್ ಷಾ ಅಫ್ರಿದಿ ಜತೆಗೆ ಬುಮ್ರಾ ಪ್ರಶಸ್ತಿ ಪೈಪೋಟಿಯಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಥಾಯ್ಲೆಂಡ್‌ನ ನಟ್ಟಾಯ ಬೂಚಥಮ್ ಮತ್ತು ಐರ್ಲೆಂಡ್‌ನ ಗ್ಯಾಬಿ ಲೆವಿಸ್ ಮತ್ತು ಎಮಿಯರ್ ರಿಚರ್ಡ್‌ಸನ್ ಈ ಪ್ರಶಸ್ತಿ ಸ್ಪರ್ಧೆಯಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ನಲ್ಲಿ 9 ವಿಕೆಟ್ ಕಬಳಿಸಿ ಮಿಂಚಿದ್ದ ಬುಮ್ರಾ, ಲಾರ್ಡ್ಸ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಶಮಿ ಜತೆಗೆ 9ನೇ ವಿಕೆಟ್‌ಗೆ ಅಮೂಲ್ಯ 89 ರನ್ ಜತೆಯಾಟವಾಡುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ರೂಟ್ ಭಾರತ ವಿರುದ್ಧ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚುವ ಮೂಲಕ ಸರಣಿಯಲ್ಲಿ 500ಕ್ಕೂ ಅಧಿಕ ರನ್ ಪೇರಿಸಿದ್ದರೆ, ಶಹೀನ್ ಷಾ ಅಫ್ರಿದಿ ಕಳೆದ ತಿಂಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 18 ವಿಕೆಟ್ ಕಬಳಿಸಿ ಮಿಂಚಿದ್ದರು.
ಈ ವರ್ಷ ಐಸಿಸಿ ಆರಂಭಿಸಿರುವ ಮಾಸಿಕ ಆಟಗಾರ ಪ್ರಶಸ್ತಿಯ ಮೊದಲ 3 ತಿಂಗಳು ಭಾರತದ ರಿಷಭ್ ಪಂತ್ (ಜನವರಿ), ಆರ್. ಅಶ್ವಿನ್ (ೆಬ್ರವರಿ) ಮತ್ತು ಭುವನೇಶ್ವರ್ ಕುಮಾರ್ (ಮಾರ್ಚ್) ಈ ಗೌರವ ಸಂಪಾದಿಸಿದ್ದರು. ಐಸಿಸಿ ವೋಟಿಂಗ್ ಅಕಾಡೆಮಿಯ ಜತೆಗೆ ಅಭಿಮಾನಿಗಳು ಐಸಿಸಿ ವೆಬ್‌ಸೈಟ್‌ನಲ್ಲಿ ಮಾಡುವ ಮತದಾನವನ್ನೂ ಪ್ರಶಸ್ತಿ ಆಯ್ಕೆಗೆ ಪರಿಗಣಿಸಲಾಗುತ್ತದೆ. ಐಸಿಸಿ ವೆಬ್‌ಸೈಟ್‌ನಲ್ಲಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಎಲ್ಲ ಕ್ರಿಕೆಟ್ ಪ್ರೇಮಿಗಳು ಜಸ್‌ಪ್ರೀತ್ ಬುಮ್ರಾಗೆ ಓಟ್ ಮಾಡಬಹುದಾಗಿದೆ.