

ಲಂಡನ್: ಭಾರತ ತಂಡದ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮೊಹಮದ್ ಶಮಿ (56*ರನ್, 70 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಜಸ್‌ಪ್ರೀತ್ ಬುಮ್ರಾ (34*ರನ್, 64 ಎಸೆತ, 3 ಬೌಂಡರಿ) ಜೋಡಿ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 272 ರನ್ ಗೆಲುವಿನ ಗುರಿ ನೀಡುವಲ್ಲಿ ಪ್ರಮುಖ ಪಾತ್ರವಹಿಸಿತು. 9ನೇ ವಿಕೆಟ್‌ಗೆ ಅದ್ಭುತ ಜತೆಯಾಟ ತೋರಿದ ಈ ಜೋಡಿ ಇಂಗ್ಲೆಂಡ್ ಬೌಲರ್‌ಗಳು ನಿರಾಸೆಯಲ್ಲಿ ಮುಳುಗುವಂತೆ ಮಾಡಿತು. ಈ ಜೋಡಿ ಮುರಿಯದ 9ನೇ ವಿಕೆಟ್‌ಗೆ 89 ರನ್ ಕಲೆಹಾಕಿತು. ಬುಮ್ರಾ-ಶಮಿ ಜತೆಯಾಟ ಭಾರತ ತಂಡದ ಹಾಲಿ ಹಾಗೂ ಮಾಜಿ ಆಟಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ಅಂತಿಮ ದಿನದಾಟದ ಭೋಜನ ವಿರಾಮಕ್ಕೆ ಆಗಮಿಸಿದ ವೇಳೆ ಈ ಜೋಡಿಗೆ ತಂಡದ ಇತರ ಆಟಗಾರರು ಭರ್ಜರಿ ಸ್ವಾಗತ ಕೋರಿದರು. ಈ ಜೋಡಿಗೆ ಸಹ ಆಟಗಾರರು ನೀಡುತ್ತಿರುವ ಸ್ವಾಗತದ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ.
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 5 ವಿಕೆಟ್‌ಗೆ 181 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ಭಾರತ ತಂಡ, ಆರಂಭದಲ್ಲೇ ಭರವಸೆಯ ಬ್ಯಾಟ್ಸ್‌ಮನ್ ರಿಷಭ್ ಪಂತ್ (22) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನ ಹಿಂದೆಯೇ ಇಶಾಂತ್ ಶರ್ಮ (16) ಕೂಡ ನಿರ್ಗಮಿಸಿದರು. ಇದರಿಂದ ಭಾರತ ತಂಡ 209 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಬಳಿಕ ಜತೆಯಾದ ಶಮಿ ಹಾಗೂ ಬುಮ್ರಾ ಜೋಡಿ ಇಂಗ್ಲೆಂಡ್ ಬೌಲರ್‌ಗಳಿಗೆ ತಡೆಗೋಡೆಯಾದರು. ಈ ಜೋಡಿ ವಿಕೆಟ್ ಒಪ್ಪಿಸದೆ ಬ್ಯಾಟಿಂಗ್ ಕಾಯ್ದುಕೊಂಡಿತು. ಶಮಿ ಟೆಸ್ಟ್ ಜೀವನದಲ್ಲಿ 2ನೇ ಅರ್ಧಶತಕ ಸಿಡಿಸಿದರು.
ಭಾರತ ತಂಡ ಮೊದಲ ಇನಿಂಗ್ಸ್ 364 ರನ್ ಪೇರಿಸಿದರೆ, ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ 391 ರನ್ ಗಳಿಸಿ 27 ರನ್ ಮುನ್ನಡೆ ಸಾಧಿಸಿತ್ತು. 2ನೇ ಇನಿಂಗ್ಸ್‌ನಲ್ಲಿ ಭಾರತ ತಂಡ 8 ವಿಕೆಟ್‌ಗೆ 298 ರನ್‌ಗಳಿಗೆ ಡಿಕ್ಲೇರ್ ಘೋಷಿಸಿ, ಇಂಗ್ಲೆಂಡ್ ತಂಡಕ್ಕೆ 272 ಗೆಲುವಿನ ಗುರಿ ನೀಡಿದೆ.