ಭಾರತ ತಂಡದ ಉಪನಾಯಕ ಸ್ಥಾನಕ್ಕೆ ಹಾರ್ದಿಕ್​-ಬುಮ್ರಾ ಪೈಪೋಟಿ

bum-pandya web
Published on

ನವದೆಹಲಿ: ನಾಯಕ ರೋಹಿತ್​ ಶರ್ಮಗೆ ಏಷ್ಯಾಕಪ್​ ಜತೆಗೆ ವಿಶ್ವಕಪ್​ನಲ್ಲೂ ಭಾರತ ತಂಡದ ಉಪನಾಯಕರಾಗಿ ನೆರವಾಗುವ ಆಟಗಾರ ಯಾರಾಗಲಿದ್ದಾರೆ ಎಂಬ ಕುತೂಹಲವಿದೆ. ಸೋಮವಾರ ಏಷ್ಯಾಕಪ್​ಗೆ ಭಾರತ ತಂಡದ ಆಯ್ಕೆಯ ವೇಳೆಗೆ ಇದು ಸ್ಪಷ್ಟವಾಗಲಿದೆ.

ಉಪನಾಯಕ ಸ್ಥಾನಕ್ಕೆ ಈಗ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಜತೆಗೆ ವೇಗಿ ಜಸ್​ಪ್ರೀತ್​ ಬುಮ್ರಾ ಪೈಪೋಟಿಯಲ್ಲಿದ್ದಾರೆ. ಹಿರಿತನ ಪರಿಗಣಿಸಿದರೆ ಬುಮ್ರಾಗೆ ಪಟ್ಟ ಒಲಿಯಲಿದೆ. ಯಾಕೆಂದರೆ ಪಾಂಡ್ಯ ಟಿ20ಯಲ್ಲಿ ಭಾರತ ತಂಡವನ್ನು ಮುನ್ನಡೆಸುವುದಕ್ಕೆ ಮುನ್ನವೇ ಬುಮ್ರಾ 2022ರಲ್ಲಿ ಇಂಗ್ಲೆಂಡ್​ನಲ್ಲಿ ಟೆಸ್ಟ್​ ತಂಡಕ್ಕೆ ನಾಯಕರಾಗಿದ್ದರು. 2022ರ ದಣ ಆಫ್ರಿಕಾ ಪ್ರವಾಸದ ವೇಳೆಯೂ ಬುಮ್ರಾ ಏಕದಿನ ತಂಡಕ್ಕೆ ಉಪನಾಯಕರಾಗಿದ್ದರು.

ನಂತರ ಬುಮ್ರಾ ಗೈರಲ್ಲಿ ಪಾಂಡ್ಯ ಏಕದಿನ ತಂಡಕ್ಕೆ ಉಪನಾಯಕರಾಗಿದ್ದರು. ಇದೀಗ ಬುಮ್ರಾ ಫಿಟ್​ ಆಗಿರುವುದರಿಂದ ಅವರಿಗೆ ಪಟ್ಟ ಮರಳುವ ನಿರೀೆ ಇದೆ. ಹಾರ್ದಿಕ್​ ಪಾಂಡ್ಯ ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​ ನಾಯಕರಾಗಿ ಮಿಂಚಿದ್ದರೂ, ಇತ್ತೀಚೆಗೆ ವೆಸ್ಟ್​ ಇಂಡೀಸ್​ ಪ್ರವಾಸದ ಟಿ20 ಸರಣಿಯಲ್ಲಿ ಅವರ ನಾಯಕತ್ವ ಟೀಕೆಗೆ ಗುರಿಯಾಗಿದ್ದು ಹಿನ್ನಡೆ ತಂದಿದೆ.

ತಿಲಕ್​ ವರ್ಮ ಅಚ್ಚರಿಯ ಆಯ್ಕೆ?

ವೆಸ್ಟ್​ ಇಂಡೀಸ್​ ಪ್ರವಾಸದ ಟಿ20 ಸರಣಿಯಲ್ಲಿ ಮಿಂಚಿದ ಯುವ ಎಡಗೈ ಬ್ಯಾಟರ್​ ತಿಲಕ್​ ವರ್ಮ ಈಗ ಏಕದಿನ ತಂಡದಲ್ಲೂ ಸ್ಥಾನ ಪಡೆಯುವ ರೇಸ್​ನಲ್ಲಿದ್ದಾರೆ. 4ನೇ ಕ್ರಮಾಂಕದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅವರು ಏಷ್ಯಾಕಪ್​ ಮಾತ್ರವಲ್ಲ ವಿಶ್ವಕಪ್​ಗೂ ಆಯ್ಕೆಯಾದರೆ ಅಚ್ಚರಿ ಇಲ್ಲವೆನಿಸಿದೆ. ಆದರೆ, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​ ಇಬ್ಬರೂ ಫಿಟ್​ ಆದರೆ ತಿಲಕ್​ಗೆ ತಂಡದಲ್ಲಿ ಸ್ಥಾನ ಕಲ್ಪಿಸುವುದು ಕಷ್ಟವಾಗಲಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ರೇಸ್​ನಲ್ಲಿ ಸಂಜು ಸ್ಯಾಮ್ಸನ್​ ಬಹುತೇಕ ಹೊರಬಿದ್ದಿದ್ದರೆ, ಸೂರ್ಯಕುಮಾರ್​ 4ನೇ ಕ್ರಮಾಂಕಕ್ಕಿಂತ ಫಿನಿಷರ್​ ಪಾತ್ರಕ್ಕೆ ಸ್ಪರ್ಧೆಯಲ್ಲಿದ್ದಾರೆ.

ಚರ್ಚೆಯಲ್ಲಿದೆ ಅಶ್ವಿನ್​ ಹೆಸರು

ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ ಹೆಸರು ಏಷ್ಯಾಕಪ್​ ಜತೆಗೆ ವಿಶ್ವಕಪ್​ ತಂಡದ ಆಯ್ಕೆ ಚರ್ಚೆಯಲ್ಲಿದೆ. ಅಕ್ಷರ್​ ಪಟೇಲ್​ಗಿಂತ ವಿಶ್ವಕಪ್​ ವೇಳೆ ಭಾರತೀಯ ವಾತಾವರಣದಲ್ಲಿ ಅಶ್ವಿನ್​ ಹೆಚ್ಚು ಪರಿಣಾಮಕಾರಿ ಎನಿಸಬಲ್ಲರು ಎಂಬುದು ಇದಕ್ಕೆ ಕಾರಣ. 2021ರ ಟಿ20 ವಿಶ್ವಕಪ್​ ವೇಳೆಯೂ ಕೊನೇಕ್ಷಣದಲ್ಲಿ ಅಶ್ವಿನ್​ ಅಚ್ಚರಿಯ ಆಯ್ಕೆಯಾಗಿದ್ದರು. ಇದೀಗ ಮತ್ತೊಮ್ಮೆ ಅವರಿಗೆ ಸೀಮಿತ ಓವರ್​ ತಂಡದ ಬಾಗಿಲು ತೆರೆಯುವುದೇ ಎಂಬ ಕುತೂಹಲವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net