ಭಾರತ-ಪಾಕಿಸ್ತಾನ ಪಂದ್ಯ ನಡೆದಿದ್ದ ಕ್ರೀಡಾಂಗಣವನ್ನು ನೆಲಸಮ ಮಾಡಲು ಮುಂದಾದ ಐಸಿಸಿ; ಕಾರಣ ಹೀಗಿದೆ

Nassau County Stadium
Published on

ನ್ಯೂಯಾರ್ಕ್​: 09ನೇ ಆವೃತ್ತಿಯ ಚುಟುಕು ವಿಶ್ವ ಸಮರ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುತ್ತಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೆರಿಕದಲ್ಲಿ ಈ ಬಾರಿಯ ಟೂರ್ನಿ ಆಯೋಜನೆಗೊಂಡಿರುವುದು ವಿಶೇಷವಾಗಿದ್ದು, ಇದೇ ಕಾರಣಕ್ಕಾಗಿ ನ್ಯೂಯಾರ್ಕ್​ನಲ್ಲಿ ನಸ್ಸೌನಲ್ಲಿ ಕ್ರೀಡಾಂಗಣ ಒಂದನ್ನು ನಿರ್ಮಿಸಲಾಗಿತ್ತು. ಆದರೆ, ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಈ ಕ್ರೀಡಾಂಗಣವನ್ನು ಕೆಡವಲಾಗುತ್ತಿದೆ ಎಂಬ ವಿಚಾರ ಹೊರಬಿದ್ದಿದೆ.

ಟಿ-20 ವಿಶ್ವಕಪ್​ಗಾಗಿ ನ್ಯೂಯಾರ್ಕ್​ನ ನಸ್ಸೌನಲ್ಲಿ ಈ ಕ್ರೀಡಾಂಗಣವನ್ನು 30 ಮಿಲಿಯನ್ ಡಾಲರ್ ಅಂದರೆ ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾಡ್ಯುಲರ್ ಗ್ರೌಂಡ್​ಅನ್ನು ನಿರ್ಮಿಸಲಾಗಿತ್ತು. ನಿರ್ಮಾಣವಾದ ಬಳಿಕ ಈ ಕ್ರೀಡಾಂಗಣದಲ್ಲಿ 08 ಟಿ-20 ಪಂದ್ಯಗಳನ್ನು ಆಡಿಸಲಾಗಿದ್ದು, ಇದೀಗ ಈ ಕ್ರೀಡಾಂಗಣವನ್ನು ಕೆಡವಲಾಗುತ್ತಿದೆ ಎಂದು ವರದಿಯಾಗಿದೆ.

ಅಮೆರಿಕದಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಇರಾದೆಯಲ್ಲಿದ್ದ ಐಸಿಸಿ, ಈ ವರ್ಷದ ಜನವರಿಯಲ್ಲಿ ನ್ಯೂಯಾರ್ಕ್‌ನಲ್ಲಿ 34,000 ಆಸನಗಳ ಮಾಡ್ಯುಲರ್ ಸ್ಟೇಡಿಯಂ ನಿರ್ಮಾಣವನ್ನು ಕೈಗೆತ್ತಿಕೊಂಡಿತ್ತು. ಅದರಂತೆ ಕೇವಲ 106 ದಿನಗಳಲ್ಲಿ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂ ಹೆಸರಿನಲ್ಲಿ ನೂತನ ತಂತ್ರಜ್ಞಾನದ ಸುಸಜ್ಜೀತ ಕ್ರೀಡಾಂಗಣವನ್ನು ನಿರ್ಮಿಸಿಲಾಗಿತ್ತು. ಈ ಮಾಡ್ಯುಲರ್ ಸ್ಟೇಡಿಯಂನ ವಿಶೇಷತೆಯೆಂದರೆ ಈ ಮೈದಾನ ಅದರ ಪಿಚ್, ಸ್ಟ್ಯಾಂಡ್ ಇತ್ಯಾದಿಗಳನ್ನು ಈ ಪಂದ್ಯಾವಳಿಗಾಗಿಯೇ ನಿರ್ಮಿಸಲಾಗಿತ್ತು. ಹಾಗಾಗಿ ಈ ಮಾಡ್ಯುಲರ್ ಕ್ರೀಡಾಂಗಣದ ನಿರ್ಮಾಣದಲ್ಲಿ ಅಲ್ಯೂಮಿನಿಯಂ ಮತ್ತು ಉಕ್ಕನ್ನು ಬಳಕೆ ಮಾಡಲಾಗಿತ್ತು.

ಸಮಯದ ಕೊರತೆ ಮತ್ತು ಪರಿಸರ ಸುಸ್ಥಿರತೆ ಎರಡು ಪ್ರಮುಖ ಕಾರಣಗಳಿಂದ ಈ ಮಾಡ್ಯುಲರ್ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿತ್ತು. ಏಕೆಂದರೆ ಟಿ20 ವಿಶ್ವಕಪ್ ಹೊರತುಪಡಿಸಿ ಅಮೆರಿಕದಲ್ಲಿ ಉಳಿದಂತೆ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವುದು ತೀರ ಕಡಿಮೆ. ಆದ್ದರಿಂದ ಟಿ20 ವಿಶ್ವಕಪ್ ಪಂದ್ಯಗಳು ಮುಗಿದ ನಂತರ ಈ ಕ್ರೀಡಾಂಗಣವನ್ನು ಕೆಡುವಬೇಕಾಗಿತ್ತು. ಹೀಗಾಗಿ ಮಾಡ್ಯುಲರ್ ಕ್ರೀಡಾಂಗಣವನ್ನು ನಿರ್ಮಿಸಲು ಐಸಿಸಿ ಮುಂದಾಗಿತ್ತು. ಇದೀಗ ಈ ಕ್ರೀಡಾಂಗಣದಲ್ಲಿ ವೇಳಾಪಟ್ಟಿಯಂತೆ 8 ಪಂದ್ಯಗಳನ್ನು ಆಡಿ ಮುಗಿಸಲಾಗಿದ್ದು, ಈ ಕ್ರೀಡಾಂಗಣ ನಿರ್ಮಾಣದ ಹಿಂದಿದ್ದ ಉದ್ದೇಶದಂತೆ ಇದೀಗ ಈ ಕ್ರೀಡಾಂಗಣವನ್ನು ನೆಲಸಮಗೊಳಿಸಿ ಮತ್ತೆ ಈ ಜಾಗವನ್ನು ತನ್ನ ಹಳೆಯ ಸ್ವರೂಪಕ್ಕೆ ತರಲಾಗುತ್ತಿದೆ.

ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಕ್ರೀಡಾಂಗಣ ಎಷ್ಟು ಚರ್ಚೆಯಲ್ಲಿತ್ತೋ, ವಿಶ್ವಕಪ್ ಆರಂಭವಾದ ನಂತರವೂ ಈ ಕ್ರೀಡಾಂಗಣದ ಪಿಚ್‌ಗಳು ಅಷ್ಟೇ ಚರ್ಚೆಯಲ್ಲಿದ್ದವು. ಈ ಪಿಚ್‌ನಲ್ಲಿ ರನ್ ಗಳಿಸಲು ಬ್ಯಾಟ್ಸ್‌ಮನ್‌ಗಳು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು. ಈ ಮೈದಾನದಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ ಕೇವಲ 108 ರನ್ ಆಗಿತ್ತು. ಅಲ್ಲದೆ ನಿನ್ನೆ ಅಮೆರಿಕ ನೀಡಿದ 111 ರನ್​ಗಳ ಗುರಿ ಬೆನ್ನಟ್ಟಲು ಟೀಂ ಇಂಡಿಯಾ ಕೂಡ ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net