ಕಿವೀಸ್ ಎದುರು ಇಂಗ್ಲೆಂಡ್‌ಗೆ ಸುಲಭ ಜಯ

New Project (6)
Published on

ಚೆಸ್ಟರ್-ಲೆ-ಸ್ಟ್ರೀಟ್: ಅನುಭವಿ ಬ್ಯಾಟರ್ ಡೇವಿಡ್ ಮಲನ್ (54 ರನ್, 42 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕ ಹಾಗೂ ಯುವ ಬ್ಯಾಟರ್ ಹ್ಯಾರಿ ಬ್ರೂಕ್ (43* ರನ್) ಜತೆಯಾಟದ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 7 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಇದರೊಂದಿಗೆ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ ಬ್ರೈಡನ್ ಕಾರ್ಸೆ (23ಕ್ಕೆ 3) ಹಾಗೂ ಲೂಕ್ ವುಡ್ (37ಕ್ಕೆ 3) ಸಂಘಟಿತ ದಾಳಿಗೆ ಕುಸಿದು 9 ವಿಕೆಟ್‌ಗೆ 139 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಪ್ರತಿಯಾಗಿ ಇಂಗ್ಲೆಂಡ್ 14 ಓವರ್‌ಗಳಲ್ಲಿ 3 ವಿಕೆಟ್‌ಗೆ 143 ರನ್‌ಗಳಿಸಿ ಸರಣಿಯಲ್ಲಿ ಶುಭಾರಂಭ ಕಂಡಿದೆ. ಎರಡನೇ ಟಿ20 ಪಂದ್ಯ ಶುಕ್ರವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

ನ್ಯೂಜಿಲೆಂಡ್: 9 ವಿಕೆಟ್‌ಗೆ 139 (ಫಿನ್ ಅಲೆನ್ 21, ಕಾನ್ ವೇ 3, ಗ್ಲೆನ್ ಫಿಲಿಪ್ಸ್ 41, ಚಾಪ್‌ಮನ್ 11, ಆಡಂ ಮಿಲ್ನೆ 10, ಇಶ್ ಸೋಧಿ 16, ಲೂಕ್ ವುಡ್ 37ಕ್ಕೆ 3, ಬ್ರೈಡನ್ ಕಾರ್ಸೆ 23ಕ್ಕೆ 3).

ಇಂಗ್ಲೆಂಡ್: 14 ಓವರ್‌ಗಳಲ್ಲಿ 3 ವಿಕೆಟ್‌ಗೆ 143 (ವಿಲ್ ಜ್ಯಾಕ್ಸ್ 22, ಡೇವಿಡ್ ಮಲನ್ 54, ಹ್ಯಾರಿ ಬ್ರೂಕ್ 43, ಲಿವಿಂಗ್‌ಸ್ಟೋನ್ 10, ಸೋಧಿ 23ಕ್ಕೆ 1). ಪಂದ್ಯಶ್ರೇಷ್ಠ: ಬ್ರೈಡನ್ ಕಾರ್ಸೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net