ಮಹಿಳೆಯರ ಏಕದಿನ ವಿಶ್ವಕಪ್​: ನ್ಯೂಜಿಲೆಂಡ್​ಗೆ ಆಘಾತ ನೀಡಿದ ದಕ್ಷಿಣ ಆಫ್ರಿಕಾ

web saw
Published on

ಇಂದೋರ್​: ಎಡಗೈ ಸ್ಪಿನ್ನರ್​ ನಾನ್ಕುಲುಲೆಕೊ ಮ್ಲಾಬಾ (40ಕ್ಕೆ 4) ಬಿಗಿ ಬೌಲಿಂಗ್​ ಮತ್ತು ಆರಂಭಿಕ ಬ್ಯಾಟುಗಾರ್ತಿ ತಜ್ಮಿನ್​ ಬ್ರಿಟ್ಸ್​ (101 ರನ್​, 89 ಎಸೆತ, 15 ಬೌಂಡರಿ, 1 ಸಿಕ್ಸರ್​) ಶತಕದಾಟದ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಮಹಿಳೆಯರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ನ್ಯೂಜಿಲೆಂಡ್​ ಎದುರು 6 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಹರಿಣಗಳಿಗೆ ಇದು ಟೂರ್ನಿಯಲ್ಲಿ ಮೊದಲ ಗೆಲುವಾಗಿದ್ದರೆ, ಟಿ20 ವಿಶ್ವ ಚಾಂಪಿಯನ್​ ನ್ಯೂಜಿಲೆಂಡ್​ ಸತತ 2ನೇ ಸೋಲಿನ ಕಹಿ ಎದುರಿಸಿತು.

ಹೋಳ್ಕರ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಕಿವೀಸ್​ ತಂಡ, ನಾಯಕಿ ಸೋಫಿ ಡಿವೈನ್​ (85 ರನ್​, 98 ಎಸೆತ, 9 ಬೌಂಡರಿ) ಆಸರೆಯಲ್ಲಿ ಒಂದು ಹಂತದಲ್ಲಿ 3 ವಿಕೆಟ್​ಗೆ 187 ರನ್​ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ನಂತರ ನಾಟಕೀಯ ಕುಸಿತ ಅನುಭವಿಸಿ 44 ರನ್​ ಅಂತರದಲ್ಲಿ ಉಳಿದ 7 ವಿಕೆಟ್​ ಕಳೆದುಕೊಂಡಿತು. ಇದರಿಂದ 47.5 ಓವರ್​ಗಳಲ್ಲಿ 231 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಬ್ರಿಟ್ಸ್​ ಬಿರುಸಿನಾಟದಿಂದ ಪ್ರ ಚೇಸಿಂಗ್​ ನಡೆಸಿದ ದ. ಆಫ್ರಿಕಾ, 40.5 ಓವರ್​ಗಳಲ್ಲಿ 4 ವಿಕೆಟ್​ಗೆ 234 ರನ್​ ಗಳಿಸಿ ಜಯಿಸಿತು. ಬ್ರಿಟ್ಸ್​ ಮತ್ತು ಸುನ್​ ಲುಜ್​ (83* ರನ್​, 114 ಎಸೆತ, 9 ಬೌಂಡರಿ, 1 ಸಿಕ್ಸರ್​) ಎರಡನೇ ವಿಕೆಟ್​ಗೆ 170 ಎಸೆತಗಳಲ್ಲಿ 159 ರನ್​ ಜತೆಯಾಟವಾಡುವ ಮೂಲಕ ಗೆಲುವಿನ ಹಾದಿ ಸುಲಭಗೊಳಿಸಿದರು. ಮೊದಲ ಪಂದ್ಯದಲ್ಲಿ ಕೇವಲ 69 ರನ್​ಗಳಿಗೆ ಆಲೌಟ್​ ಆಗಿ ಸೋತಿದ್ದ ಲೌರಾ ವೊಲ್ವಾರ್ಡ್​ ಪಡೆ, 55 ಎಸೆತ ಬಾಕಿ ಇರುವಂತೆಯೇ ಜಯಿಸುವ ಮೂಲಕ ರನ್​ರೇಟ್​ ಕೂಡ ಸುಧಾರಿಸಿಕೊಂಡಿತು.

ನ್ಯೂಜಿಲೆಂಡ್​: 47.5 ಓವರ್​ಗಳಲ್ಲಿ 231 (ಪ್ಲಿಮ್ಮರ್​ 31, ಅಮೆಲಿಯಾ 23, ಡಿವೈನ್​ 85, ಬ್ರೂಕ್​ ಹಾಲಿಡೇ 45, ಮ್ಲಾಬಾ 40ಕ್ಕೆ 4, ಕಾಪ್​ 34ಕ್ಕೆ 1). ದಕ್ಷಿಣ ಆಫ್ರಿಕಾ: 40.5 ಓವರ್​ಗಳಲ್ಲಿ 4 ವಿಕೆಟ್​ಗೆ 234 (ಲೌರಾ 14, ಬ್ರಿಟ್ಸ್​ 101, ಲುಜ್​ 83*, ಕಾಪ್​ 14, ಅಮೆಲಿಯಾ 62ಕ್ಕೆ 2, ಜೆಸ್​ ಕೆರ್​ 41ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net