

ಪುಣೆ: ಪಂದ್ಯದ ಉಭಯ ಅವಧಿಗಳಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಯು.ಪಿ. ಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಮೊದಲ ಎಲಿಮಿನೇಟರ್ ಪಂದ್ಯದಲ್ಲಿಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 28 ಅಂಕಗಳಿಂದ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಬಾಳೇವಾಡಿ ಕ್ರಿಡಾ ಸಂಕೀರ್ಣದಲ್ಲಿಗುರುವಾರ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮಿಂಚಿದ ಯೋಧಾಸ್ ತಂಡ 46-18 ಅಂಕಗಳ ಅಂತರದಿಂದ ಜೈಪುರ ಪ್ಯಾಂಥರ್ಸ್ ತಂಡವನ್ನು ಹಣಿಯಿತು. ಈ ಮೂಲಕ ಡಿಸೆಂಬರ್ 27ರಂದು ನಡೆಯಲಿರುವ ಹರಿಯಾಣ ಸ್ಟಿಲರ್ಸ್ ಎದುರಿನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ದಪಡಿಸಿಕೊಂಡಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಹರಿಯಾಣ ಸ್ಟಿಲರ್ಸ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಯೋಧಾಸ್ ತಂಡದ ಪರ ಭವಾನಿ ರಾಜ್‌ಪೂತ್ (12 ಅಂಕ) ಸೂಪರ್ ಟೆನ್ ಸಾಹಸ ಮಾಡಿದರೆ, ಹಿತೇಶ್, ಮಹೇಂದರ್ ಸಿಂಗ್ ಮತ್ತು ಗಗನ್ ಗೌಡ ಕ್ರಮವಾಗಿ 6, 4 ಮತ್ತು 5 ಅಂಕಗಳ ಕೊಡುಗೆ ನೀಡಿದರು. ಅತ್ತ ಅನಿರೀಕ್ಷಿತ ಆಘಾತಕ್ಕೆ ಒಳಗಾದ ಜೈಪುರ ಪಿಂಕ್ ಪ್ಯಾಂಥರ್ಸ್ ಪರ ರೇಜಾ ಮಿರ್‌ಬಘೇರಿ ಗರಿಷ್ಠ 5 ಅಂಕ ಗಳಿಸಿದರು. ಈ ಸೋಲಿನೊಂದಿಗೆ ಜೈಪುರ ತಂಡವು ಆರನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿತು.
ಮೊದಲಾರ್ಧದಲ್ಲಿಲಭಿಸಿದ ಮುನ್ನಡೆಯಿಂದ ಒತ್ತಡ ಮುಕ್ತಗೊಂಡ ಯೋಧಾಸ್, ದ್ವಿತೀಯಾರ್ಧದಲ್ಲಿ ಇನ್ನಷ್ಟು ಆಕ್ರಮಕಾರಿ ಆಟಕ್ಕೆ ಒತ್ತು ನೀಡಿತು.ಇದು ಜೈಪುರ ತಂಡದ ಮೇಲಿನ ಒತ್ತಡವನ್ನು ಹೆಚ್ಚಿಸಿತು. ಸಂಪೂರ್ಣವಾಗಿ ಸೊರಗಿದ ಜೈಪುರದ ರೇಜಾ ಅವರನ್ನು 25ನೇ ನಿಮಿಷದಲ್ಲಿಟ್ಯಾಕಲ್ ಮಾಡಿದ ಭವಾನಿ ಯೋಧಾಸ್ ಗೆಲುವನ್ನು ಖಚಿತಪಡಿಸಿರು. 20ರಿಂದ 30 ನಿಮಿಷಗಳ ಅವಧಿಯಲ್ಲಿ14 ಅಂಕಗಳನ್ನು ಹೆಕ್ಕಿದರೆ, ಜೈಪುರ ಕೇವಲ 5 ಅಂಕಕ್ಕೆ ಸೀಮಿತಗೊಂಡಿತು.
ಭವಾನಿ ರಾಜ್‌ಪೂತ್ ಅವರ ಅದ್ಭುತ ಆಟದ ಜತೆಗೆ ಸಾಂಘಿಕ ಪ್ರದರ್ಶನ ನೀಡಿದ ಯು.ಪಿ. ಯೋಧಾಸ್ ತಂಡ ಮೊದಲ ಅವಧಿಯ ಅಂತ್ಯಕ್ಕೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ವಿರುದ್ಧ 23-8ಅಂಕಗಳಿಂದ ಮೇಲುಗೈ ಸಾಧಿಸಿತು. ಉಭಯ ತಂಡಗಳು ಮೊದಲ ಐದು ನಿಮಿಷಗಳ ಆಟದಲ್ಲಿಜಿದ್ದಾಜಿದ್ದಿನ ಹೋರಾಟ ಸಂಘಟಿಸಿದವು. 2-2ರ ಬಳಿಕ ಯೋಧಾಸ್ ಮೇಲುಗೈ ವಿಸ್ತರಿಸಿತು. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿರುವ ಯೋಧಾಸ್ ಆಟಗಾರರು ಹೊಂದಾಣಿಕೆ ಆಟವಾಡುವಲ್ಲಿಎಡವಿದ ಜೈಪುರ ತಂಡದ ಮೇಲೆ ಅಬ್ಬರಿಸಿದರು. ಇದರ ಫಲವಾಗಿ 7ನೇ ನಿಮಿಷದಲ್ಲೆ ಮಾಜಿ ಚಾಂಪಿಯನ್ಸ್ ಪ್ಯಾಂಥರ್ಸ್ ತಂಡವನ್ನು ಕಟ್ಟಿಹಾಕಿದ ಯೋಧಾಸ್ 10-3 ಅಂಕಗಳಿಂದ ಪ್ರಭುತ್ವ ಸಾಧಿಸಿತು. ರೇಜಾ ಮಿರ್‌ಬಘೇರ ಅವರನ್ನು ಟ್ಯಾಕಲ್ ಮಾಡಿದ ಅಶು ಸಿಂಗ್, ಯೋಧಾಸ್ ಆಲೌಟ್ ಅಂಕ ತಂದುಕೊಟ್ಟರು.
ಆರಂಭಿಕ ಹಿನ್ನಡೆಯಿಂದ ಸಹಜವಾಗಿಯೇ ಒತ್ತಡಕ್ಕೆ ಸಿಲುಕಿದ ಜೈಪುರ ತಂಡ ಟ್ಯಾಕಲ್ ಮತ್ತು ರೇಡಿಂಗ್ ಎರಡರಲ್ಲೂಅಂಕ ಗಳಿಸಲು ತಿಣುಕಾಡಿತು. 15 ನಿಮಿಷಗಳ ಆಟಕ್ಕೆ 13-6ರಲ್ಲಿಮೇಲುಗೈ ಸಾಧಿಸಿದಯೋಧಾಸ್ ಆತ್ಮವಿಶ್ವಾಸದೊಂದಿಗೆ ಮಿಂಚಿತು. ಮೊದಲಾರ್ಧ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿರುವಾಗ ಎರಡನೇ ಬಾರಿ ಜೈಪುರ ತಂಡವನ್ನು ಆಲೌಟ್ ಮಾಡಿದ ಯೋಧಾಸ್ ತಂಡ 23-8ರಲ್ಲಿಅಂತರ ಕಾಯ್ದುಕೊಳ್ಳುವ ಮೂಲಕ ದ್ವಿತೀಯಾರ್ಧಕ್ಕೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿತು. ಭವಾನಿ ಅಲ್ಲದೆ, ಗಗನ್ ಗೌಡ ಮತ್ತು ನಾಯಕ ಸುಮಿತ್ ತಂಡದ ಮುನ್ನಡೆಯಲ್ಲಿನಿರ್ಣಾಯಕ ಪಾತ್ರವಹಿಸಿದರು.