

ಡಾರ್ವಿನ್: ಯುವ ಬ್ಯಾಟರ್ ಡಿವಾಲ್ಡ್ ಬ್ರೆವಿಸ್ (125*ರನ್, 56 ಎಸೆತ, 12 ಬೌಂಡರಿ, 8 ಸಿಕ್ಸರ್) ಚೊಚ್ಚಲ ಶತಕದಬ್ಬರದ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಆಸ್ಟ್ರೆಲಿಯಾ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ 53 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಏಡನ್ ಮಾರ್ಕ್ರಮ್ ಬಳಗ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ನಿರ್ಣಾಯಕ 3ನೇ ಟಿ20 ಪಂದ್ಯ ಶನಿವಾರ ನಡೆಯಲಿದೆ.
ಮರಾರಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಫ್ರಿಕಾ, ಬ್ರೆವಿಸ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ (31) 4ನೇ ವಿಕೆಟ್ಗೆ 57 ಎಸೆತಗಳಲ್ಲೇ 126 ರನ್ ಸೇರಿಸಿದ ಬಲದಿಂದ 7 ವಿಕೆಟ್ಗೆ 218 ರನ್ ಕಲೆಹಾಕಿತು. ಪ್ರತಿಯಾಗಿ ಆಸೀಸ್, 17.4 ಓವರ್ಗಳಲ್ಲಿ 165 ರನ್ಗಳಿಗೆ ಆಲೌಟ್ ಆಗಿ ಶರಣಾಯಿತು.
ಆಫ್ರಿಕಾ: 7 ವಿಕೆಟ್ಗೆ 218 (ಬ್ರೆವಿಸ್ 125*, ಸ್ಟಬ್ಸ್ 31, ಮ್ಯಾಕ್ಸ್ವೆಲ್ 44ಕ್ಕೆ 2, ಡ್ವಾರ್ಶುಯಿಸ್ 24ಕ್ಕೆ 2), ಆಸ್ಟ್ರೆಲಿಯಾ: 17.4 ಓವರ್ಗಳಲ್ಲಿ 165 (ಮಾರ್ಷ್ 22, ಹೆಡ್ 5, ಟಿಮ್ ಡೇವಿಡ್ 50, ಮ್ಯಾಕ್ಸ್ವೆಲ್ 16, ಕ್ಯಾರಿ 26, ಮಾಕ 57ಕ್ಕೆ 3, ಬೋಷ್ 20ಕ್ಕೆ 3), ಪಂದ್ಯಶ್ರೇಷ್ಠ: ಡಿವಾಲ್ಡ್ ಬ್ರೆವಿಸ್.
ಏಷ್ಯಾಕಪ್ ಭಾರತ ತಂಡ ಪ್ರಕಟ
ನವದೆಹಲಿ: ಮುಂಬರುವ ಏಷ್ಯಾಕಪ್ ಟಿ20 ಟೂರ್ನಿಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಆಗಸ್ಟ್ 19 ಅಥವಾ 20ರಂದು ಮುಂಬೈನಲ್ಲಿ ಸಭೆ ಸೇರಿ ಭಾರತ ತಂಡವನ್ನು ಆರಿಸಲಿದೆ. ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ (ಸಿಒಇ) ಪ್ರಸಕ್ತ ನಾಯಕ ಸೂರ್ಯಕುಮಾರ್ ಯಾದವ್ ಸಹಿತ ಕೆಲ ಆಟಗಾರರ ಫಿಟ್ನೆಸ್ ಪರೀಕ್ಷೆಗಳು ನಡೆಯುತ್ತಿದೆ. ಸಿಒಇ ವೈದ್ಯಕಿಯ ತಂಡ ಎಲ್ಲ ಆಟಗಾರರ ಫಿಟ್ನೆಸ್ ವರದಿಯನ್ನು ಸಲ್ಲಿಸಿದ ಬೆನ್ನಲ್ಲೇ ಆಯ್ಕೆ ಸಮಿತಿ ಸಭೆ ಸೇರಲಿದೆ.
ಸಂಜು ಸ್ಯಾಮ್ಸನ್ ಜತೆಗೆ 2ನೇ ವಿಕೆಟ್ ಕೀಪರ್ ಸ್ಥಾನಕ್ಕೆ ಜಿತೇಶ್ ಶರ್ಮ ಮತ್ತು ಧ್ರುವ ಜುರೆಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡ ನಿತೀಶ್ ಕುಮಾರ್ ರೆಡ್ಡಿ ಏಷ್ಯಾಕಪ್ಗೆ ಫಿಟ್ ಆಗುವ ಸಾಧ್ಯತೆ ಇಲ್ಲ. ಹೀಗಾಗಿ ವೇಗದ ಬೌಲಿಂಗ್ ಆಲ್ರೌಂಡರ್ ಸ್ಥಾನವನ್ನು ಶಿವಂ ದುಬೆ ತುಂಬಲಿದ್ದಾರೆ. ಜಸ್ಪ್ರೀತ್ ಬುಮ್ರಾ ಏಷ್ಯಾಕಪ್ನಲ್ಲಿ ಆಡುವ ಸಾಧ್ಯತೆ ಹೆಚ್ಚಿದ್ದು, ಅರ್ಷದೀಪ್ ಸಿಂಗ್ ಜತೆಗೆ 3ನೇ ವೇಗದ ಬೌಲರ್ ಸ್ಥಾನಕ್ಕೆ ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತು ಹರ್ಷಿತ್ ರಾಣಾ ನಡುವೆ ಸ್ಪರ್ಧೆ ಇದೆ ಎನ್ನಲಾಗಿದೆ.
ಏಷ್ಯಾಕಪ್ಗೆ ಸಂಭಾವ್ಯ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮಾನ್ ಗಿಲ್, ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್ (ವಿ.ಕೀ), ತಿಲಕ್ ವರ್ಮ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ/ಪ್ರಸಿದ್ಧಕೃಷ್ಣ, ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮ/ಧ್ರುವ ಜುರೆಲ್.