

ನವದೆಹಲಿ: ಈ ವರ್ಷದ ಕೊನೆಯಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತದ ಆರಂಭಿಕ ಆಟಗಾರ, ಸ್ಪೋಟಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಅವರು ತಮ್ಮ ಆಟವನ್ನು ಬದಲಾಯಿಸಬೇಕಾಗುತ್ತದೆ. ವೇಗ ಮತ್ತು ಬೌನ್ಸ್‌ನಿಂದ ಹೊಸ ಶ್ರೇಣಿಯ ಹಿಟ್ಟಿಂಗ್ನಿಂದ ಬರಬೇಕಾಗುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಜೈಸ್ವಾಲ್ ಭಾರತಕ್ಕೆ ಅದ್ವಿತೀಯ ಆಟಗಾರರಾಗಿ ಹೊರಹೊಮ್ಮಿದರು. ಟೆಸ್ಟ್ ಸಿರೀಸ್ನ ಐದು ಪಂದ್ಯಗಳಲ್ಲಿ ಮತ್ತು ಒಂಬತ್ತು ಇನ್ನಿಂಗ್ಸ್‌ಗಳಲ್ಲಿ, ಜೈ ಎರಡು ದ್ವಿಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 89.00 ಸರಾಸರಿಯಲ್ಲಿ 712 ರನ್ ಗಳಿಸಿದರು. ಅವರ ಉತ್ತಮ ಸ್ಕೋರ್ ಅಜೆಯ 214. ಸದ್ಯ ಯಶಸ್ವಿ ಬ್ಯಾಟಿಂಗ್ ವೈಖರಿ ಕಂಡ ಬ್ರಾಡ್ ಹಾಗ್, ಈ ಕುರಿತಂತೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
"ಜೈಸ್ವಾಲ್ ಆಸ್ಟ್ರೇಲಿಯಾದ ವೇಗಿಗಳನ್ನು ಎದುರಿಸುವುದರಿಂದ ಅವರು ಅದಕ್ಕೆ ತಕ್ಕಂತೆ ಹೊಸ ಶ್ರೇಣಿಯ ಹಿಟ್ಟಿಂಗ್ನೊಂದಿಗೆ ಬರಬೇಕಾಗುತ್ತದೆ. ಅವರು ಬಲವಾಗಿ ಹೊಡೆಯಲು ಪ್ರಯತ್ನಿಸುವ ಬದಲು, ಹುಕ್ ಮತ್ತು ಪುಲ್‌ಗಳನ್ನು ಆಡುವಾಗ ವೇಗವನ್ನು ಹೆಚ್ಚು ಬಳಸಬೇಕಾಗುತ್ತದೆ" ಎಂದು ಬ್ರಾಡ್ ಹಾಗ್ ಹೇಳಿದರು.
ಇನ್ನು ಭಾರತ ತಂಡದ ಮತ್ತೊಬ್ಬ ಯುವ ಆಟಗಾರ ಸರ್ಫರಾಜ್ ಖಾನ್ ಬಗ್ಗೆಯೂ ಮಾತನಾಡಿದ ಹಾಗ್, "ವೇಗದ ಬೌಲಿಂಗ್ ವಿರುದ್ಧ ಸರ್ಫರಾಜ್ ಅವರ ಆಟದ ಬಗ್ಗೆ ನಾನು ಅನುಮಾನಿಸಿದ್ದೆ, ಆದರೆ ವೇಗಿಗಳ ವಿರುದ್ಧ ಅವರ ಕೆಲವು ಶಾಟ್-ಮೇಕಿಂಗ್ ನಿಜಕ್ಕೂ ಕೆಲಸ ಮಾಡಿತು. ಮುಂಬರುವ ಸರಣಿಗಳಲ್ಲಿ ಬಲಿಷ್ಠ ಆಸೀಸ್ ಅನ್ನು ಎದುರಿಸಲು ಸರ್ಫರಾಜ್ ಬಹುತೇಕ ಸಿದ್ಧರಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).