

ಮೆಲ್ಬೋರ್ನ್: ಭಾರತ-ಆಸೀಸ್ ನಡುವಿನ ಮೆಲ್ಬೋರ್ನ್ ಟೆಸ್ಟ್ ಪಂದ್ಯವನ್ನು 5 ದಿನಗಳಲ್ಲಿ ಒಟ್ಟಾರೆ 3,73,691 ಪ್ರೇಕ್ಷಕರು ವೀಕ್ಷಿಸಿದರು. ಇದು ಕಾಂಗರೂ ನಾಡಿನ 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಗರಿಷ್ಠ ಪ್ರೇಕ್ಷಕರು ವೀಕ್ಷಿಸಿದ ಪಂದ್ಯ ಎನಿಸಿದೆ.
ಪಂದ್ಯದ ಕೊನೇ ದಿನದಾಟವನ್ನು ಭೋಜನ ವಿರಾಮದ ವೇಳೆಗೆ 51,371 ಪ್ರೇಕ್ಷಕರು ವೀಕ್ಷಿಸಿದರು. ಇದರೊಂದಿಗೆ 1937ರ ಆಶಸ್ ಸರಣಿಯಲ್ಲಿ ದಿಗ್ಗಜ ಡಾನ್ ಬ್ರಾಡ್ಮನ್ ಉನ್ನತ ಫಾರ್ಮ್ನಲ್ಲಿದ್ದಾಗ 3,50,535 ಪ್ರೇಕ್ಷಕರು ವೀಕ್ಷಿಸಿದ್ದ ಟೆಸ್ಟ್ ಪಂದ್ಯದ ದಾಖಲೆ ಅಳಿಸಿತು.
ಕೊನೇ ದಿನ ಭೋಜನ ವಿರಾಮದ ಬಳಿಕ ಪ್ರೇಕ್ಷಕರ ಸಂಖ್ಯೆ 74 ಸಾವಿರದ ಗಡಿ ದಾಟಿತು. ಒಟ್ಟಾರೆಯಾಗಿ ಇದು 2ನೇ ಗರಿಷ್ಠ ಪ್ರೇಕ್ಷಕರು ವೀಕ್ಷಿಸಿದ ಟೆಸ್ಟ್ ಪಂದ್ಯವೆನಿಸಿದೆ. 1999ರಲ್ಲಿ ಭಾರತ-ಪಾಕಿಸ್ತಾನ ನಡುವಿನ ಕೋಲ್ಕತ ಟೆಸ್ಟ್ ಪಂದ್ಯವನ್ನು 4.65 ಲಕ್ಷ ಪ್ರೇಕ್ಷಕರು ವೀಕ್ಷಿಸಿರುವುದು ಸಾರ್ವಕಾಲಿಕ ದಾಖಲೆ ಎನಿಸಿದೆ.