VIDEO: ಅಂಪೈರ್ ನೀಡಿದ್ದು ಎಲ್‌ಬಿಡಬ್ಲ್ಯು, ಆಗಿದ್ದು ಬೋಲ್ಡ್, ಆದರೂ ಸ್ಟೋಕ್ಸ್ ಔಟಾಗಲಿಲ್ಲ!

stokes web
Published on

ಸಿಡ್ನಿ: ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಅಂಪೈರ್ ಎಲ್‌ಬಿಡಬ್ಲ್ಯು ತೀರ್ಪು ನೀಡಿದಾಗ ಬ್ಯಾಟ್ಸ್‌ಮನ್‌ಗೆ ಅದರ ವಿರುದ್ಧ ಅಸಮಾಧಾನವಿದ್ದರೆ ಡಿಆರ್‌ಎಸ್ ಮೂಲಕ ಮೇಲ್ಮನವಿ ಸಲ್ಲಿಸಿದಾಗ ತೃತೀಯ ಅಂಪೈರ್, ಚೆಂಡು ಬ್ಯಾಟ್ ಅಥವಾ ಪ್ಯಾಡ್‌ಗೆ ಬಡಿದಿದೆಯೇ ಎಂದು ಪರೀಕ್ಷಿಸುತ್ತಾರೆ. ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಈ ರೀತಿ ಎಲ್‌ಬಿಡಬ್ಲ್ಯು ತೀರ್ಪಿನ ಡಿಆರ್‌ಎಸ್ ಪರಿಶೀಲನೆಯಲ್ಲಿದ್ದಾಗ ತೃತೀಯ ಅಂಪೈರ್‌ಗೆ ಅಚ್ಚರಿಯ ಅಂಶ ಕಂಡುಬಂದಿತ್ತು. ಅದರನ್ವಯ ಚೆಂಡು ಬ್ಯಾಟ್ ಅಥವಾ ಪ್ಯಾಡ್‌ಗೆ ಬಡಿದಿರಲಿಲ್ಲ. ಬದಲಾಗಿ ವಿಕೆಟ್‌ಗೆ ಬಡಿದಿತ್ತು! ಆದರೂ ಅವರು ಔಟ್ ತೀರ್ಪು ನೀಡುವಂತಿರಲಿಲ್ಲ! ಯಾಕೆ ಹೀಗಾಯಿತು ಎಂದು ತಿಳಿಯಬೇಕಿದ್ದರೆ ಈ ಸ್ಟೋರಿ ಪೂರ್ತಿ ಓದಿ….

ಸಿಡ್ನಿ ಟೆಸ್ಟ್ ಪಂದ್ಯದ 3ನೇ ದಿನ ಬೆನ್ ಸ್ಟೋಕ್ಸ್ ವಿರುದ್ಧ ವೇಗಿ ಕ್ರಿಸ್ ಗ್ರೀನ್ ಎಲ್‌ಬಿಡಬ್ಲ್ಯು ಮನವಿ ಸಲ್ಲಿಸಿದಾಗ ಅಂಪೈರ್ ಅದನ್ನು ಪುರಸ್ಕರಿಸಿದರು. ತಕ್ಷಣವೇ ಸ್ಟೋಕ್ಸ್ ಡಿಆರ್‌ಎಸ್ ಮೊರೆ ಹೋದರು. ತೃತೀಯ ಅಂಪೈರ್ ಪರಿಶೀಲಿಸಿದಾಗ ಚೆಂಡು ಬ್ಯಾಟ್ ಅಥವಾ ಪ್ಯಾಡ್‌ಗೆ ಬಡಿದಿರಲಿಲ್ಲ. ಚೆಂಡು ಸ್ಟಂಪ್ಸ್‌ಗೆ ಸ್ಪರ್ಶಿಸಿ ಕೀಪರ್ ಕೈಸೇರಿತ್ತು. ಟಿವಿ ಮರುಪ್ರಸಾರದಲ್ಲಿ ತೃತೀಯ ಅಂಪೈರ್‌ಗೆ ಇದು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ಅವರು ಎಲ್‌ಬಿಡಬ್ಲ್ಯು ಬದಲಾಗಿ ಬೋಲ್ಡ್ ತೀರ್ಪು ನೀಡಲಿಲ್ಲ. ಅದಕ್ಕೆ ಕಾರಣ, ಚೆಂಡು ಬಡಿದರೂ ಬೇಲ್ಸ್ ಬಿದ್ದಿರಲಿಲ್ಲ. ಕ್ರಿಕೆಟ್ ನಿಯಮಾವಳಿಯ ಪ್ರಕಾರ, ಬ್ಯಾಟ್ಸ್‌ಮನ್ ಬೋಲ್ಡ್ ಎಂದು ತೀರ್ಪು ನೀಡಬೇಕಾದರೆ ವಿಕೆಟ್ ಮೇಲಿನ ಬೇಲ್ಸ್ ಬೀಳಬೇಕು. ಹೀಗಾಗಿ ಸ್ಟೋಕ್ಸ್ ‘ನಾಟೌಟ್’ ತೀರ್ಪಿನೊಂದಿಗೆ ಬ್ಯಾಟಿಂಗ್ ಮುಂದುವರಿಸಿದರು. ಆದರೆ ಈ ಘಟನೆಯ ಬಗ್ಗೆ ಇದೀಗ ಕ್ರಿಕೆಟ್ ವಲಯದಲ್ಲಿ ಬಿಸಿಬಿಸಿ ಚರ್ಚೆಗಳು ಶುರುವಾಗಿವೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಕ್ರಿಕೆಟ್‌ನಲ್ಲಿ ಇನ್ನು ಚೆಂಡು ಸ್ಟಂಪ್ಸ್‌ಗೆ ಬಡಿದು ಬೇಲ್ಸ್ ಬೀಳದಿದ್ದರೂ ಔಟ್ ತೀರ್ಪು ನೀಡಬೇಕು. ಇದರಿಂದ ಬೌಲರ್‌ಗಳಿಗೂ ನ್ಯಾಯ ಸಿಗುವಂತಾಗಬೇಕು ಎಂದು ಟ್ವೀಟಿಸಿದ್ದಾರೆ. ಇದಕ್ಕೆ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಧ್ವನಿಗೂಡಿಸಿದ್ದು, ಗಂಟೆಗೆ 142 ಕಿಮೀ ವೇಗದ ಎಸೆತ ಅದಾಗಿದ್ದರೂ ಬೇಲ್ಸ್ ಯಾಕೆ ಬೀಳಲಿಲ್ಲವೆಂದು ಅಚ್ಚರಿಯಾಗುತ್ತಿದೆ. ನಿಮ್ಮ ಅಭಿಪ್ರಾಯವನ್ನು ಐಸಿಸಿ ಕ್ರಿಕೆಟ್ ಸಮಿತಿ ಗಮನಕ್ಕೆ ತರುತ್ತೇನೆ. ನಿಮ್ಮ ವಾದವನ್ನು ನಾನೂ ಒಪ್ಪುವೆ ಎಂದಿದ್ದಾರೆ. ಚೆಂಡು ಬ್ಯಾಟ್ ಅಥವಾ ಪ್ಯಾಡ್‌ಗೆ ಬಡಿಯದಿದ್ದರೂ ಮೈದಾನದ ಅಂಪೈರ್ ಅದಕ್ಕೆ ಹೇಗೆ ಎಲ್‌ಬಿಡಬ್ಲ್ಯು ತೀರ್ಪು ನೀಡಿದ್ದರು ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ನಿಮ್ಮ ಆಫ್​-ಸ್ಟಂಪ್ ಬಗ್ಗೆ ನಿಮಗೆ ಆತ್ಮವಿಶ್ವಾಸವಿದ್ದಾಗ, ನಿಮ್ಮ ಆಫ್​-ಸ್ಟಂಪ್‌ಗೂ ನಿಮ್ಮ ಬಗ್ಗೆ ಅದೇ ರೀತಿಯ ಆತ್ಮವಿಶ್ವಾಸವಿರುತ್ತದೆ’ ಎಂದು ಕ್ರಿಕೆಟಿಗ ದಿನೇಶ್ ಕಾರ್ತಿಕ್ ತಮಾಷೆಯಾಗಿ ಟ್ವೀಟಿಸಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಈ ವಿಡಿಯೋವನ್ನು ಹಂಚಿಕೊಂಡು, ‘ನಂಬಲಸಾಧ್ಯ’ ಎಂದು ಬರೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net