ಚೆನ್ನೈ ಸೂಪರ್​ಕಿಂಗ್ಸ್ ತಂಡಕ್ಕೆ ಇನ್ನೂ ಇದೆ ಪ್ಲೇಆಫ್​ ಅವಕಾಶ! ಹೀಗಿದೆ ಲೆಕ್ಕಾಚಾರ...

csk
Published on

ಬೆಂಗಳೂರು: ಆಡಿದ ಮೊದಲ 10 ಪಂದ್ಯಗಳಲ್ಲಿ 7 ಸೋಲು ಅನುಭವಿಸಿ ಐಪಿಎಲ್​ 13ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿರುವ ಚೆನ್ನೈ ಸೂಪರ್​ಕಿಂಗ್ಸ್​ ತಂಡಕ್ಕೆ ಪ್ಲೇಆಫ್​ ಹಂತಕ್ಕೇರುವ ಅವಕಾಶದ ಬಾಗಿಲು ಮುಚ್ಚಿ ಹೋಗಿದೆ ಎಂಬುದು ಹೆಚ್ಚಿನ ಎಲ್ಲ ಕ್ರಿಕೆಟ್​ ಪ್ರೇಮಿಗಳ ಭಾವನೆಯಾಗಿದೆ. ಆದರೆ ಎಂಎಸ್​ ಧೋನಿ ಸಾರಥ್ಯದ ತಂಡಕ್ಕೆ ಟೂರ್ನಿಯಲ್ಲಿ ಇನ್ನೂ ಪ್ರಶಸ್ತಿ ಗೆಲುವಿನ ಅವಕಾಶಗಳಿವೆ. ಲೆಕ್ಕಾಚಾರಗಳ ಪ್ರಕಾರ, 3 ಬಾರಿಯ ಚಾಂಪಿಯನ್​ ಸಿಎಸ್​ಕೆ ತಂಡಕ್ಕೆ ಈ ಸಲವೇ 4ನೇ ಬಾರಿ ಪ್ರಶಸ್ತಿ ಒಲಿಸಿಕೊಳ್ಳುವ ಅವಕಾಶ ಇನ್ನೂ ಜೀವಂತವಾಗಿದೆ. ಆ ಲೆಕ್ಕಾಚಾರ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ...

ಟೂರ್ನಿಯ ಹಾಲಿ ಅಂಕಪಟ್ಟಿಯನ್ನು ಗಮನಿಸಿದಾಗ ಯಾವ ತಂಡಕ್ಕೂ ಇನ್ನೂ ಪ್ಲೇಆಫ್​ ಸ್ಥಾನ ಖಚಿತಗೊಂಡಿಲ್ಲ. ಅದೇ ರೀತಿ ಯಾವ ತಂಡವೂ ಇನ್ನೂ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿಲ್ಲ. ಅಗ್ರ 2 ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​ಸಿಬಿ ಕೂಡ ಪ್ಲೇಆಫ್​ ಪ್ರವೇಶ ಖಚಿತಪಡಿಸಿಕೊಳ್ಳಲು ಇನ್ನೊಂದು ಪಂದ್ಯವನ್ನು ಗೆಲ್ಲಬೇಕಾದ ಅಗತ್ಯವಿದೆ. ಮೂರನೇ ತಂಡವಾಗಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಪ್ಲೇಆಫ್​ ಹಂತಕ್ಕೇರುವುದು ಬಹುತೇಕ ಖಚಿತವೆನಿಸಿದೆ. ಇನ್ನುಳಿದ ಒಂದು ಸ್ಥಾನಕ್ಕೆ ಬಾಕಿ 5 ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ನಿರೀಕ್ಷೆ ಇಡಲಾಗಿದೆ.

ಚೆನ್ನೈ ಸೂಪರ್​ಕಿಂಗ್ಸ್ ತಂಡದ ವಿಷಯಕ್ಕೆ ಬಂದರೆ, ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 3ರಲ್ಲಷ್ಟೇ ಗೆದ್ದು, 7ರಲ್ಲಿ ಸೋಲು ಕಂಡಿದೆ. ಇದರಿಂದ ಕೇವಲ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಬಾಕಿ ಉಳಿದಿರುವ 4 ಪಂದ್ಯಗಳಲ್ಲೂ ಭರ್ಜರಿಯಾಗಿ ಗೆಲುವು ಕಂಡರೆ ಚೆನ್ನೈ ಸೂಪರ್​ಕಿಂಗ್ಸ್ ತಂಡ 14 ಅಂಕಗಳೊಂದಿಗೆ ಪ್ಲೇಆಫ್​ಗೆ ಏರಬಹುದಾಗಿದೆ. ಆದರೆ ಇದಕ್ಕೆ ಅದೃಷ್ಟವೂ ಸಿಎಸ್​ಕೆ ತಂಡಕ್ಕೆ ಸಾಥ್​ ನೀಡಬೇಕಾಗಿದೆ.

ಸಿಎಸ್​ಕೆ ತಂಡ ಉಳಿದ 4 ಪಂದ್ಯಗಳಲ್ಲಿ ಜಯಿಸುವ ಜತೆಗೆ ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್​, ಸನ್​ರೈಸರ್ಸ್​ ಮತ್ತು ಕಿಂಗ್ಸ್​ ಇಲೆವೆನ್​ ಪಂಜಾಬ್ ತಂಡಗಳು ಬಾಕಿ ಉಳಿದಿರುವ ಪಂದ್ಯಗಳ ಪೈಕಿ ಕನಿಷ್ಠ 2ರಲ್ಲಿ ಸೋಲಬೇಕಾಗಿದೆ. ಜತೆಗೆ ಕೋಲ್ಕತ ನೈಟ್​ರೈಡರ್ಸ್ ತಂಡವೂ ಬಾಕಿ ಉಳಿದಿರುವ 4 ಪಂದ್ಯಗಳ ಪೈಕಿ 3ರಲ್ಲಿ ಸೋಲು ಕಾಣಬೇಕಾಗಿದೆ. ಇದರಿಂದ ಇವೆಲ್ಲ ತಂಡಗಳು ಗರಿಷ್ಠ 12 ಅಂಕಗಳನ್ನಷ್ಟೇ ಗಳಿಸಲಿವೆ. ಆಗ ಸಿಎಸ್​ಕೆ ತಂಡ 14 ಅಂಕಗಳೊಂದಿಗೆ ಸರಾಗವಾಗಿ ಪ್ಲೇಆಫ್​ ಹಂತಕ್ಕೇರಬಹುದಾಗಿದೆ.

ಇನ್ನೊಂದು ಲೆಕ್ಕಾಚಾರದ ಪ್ರಕಾರ, ಸಿಎಸ್​ಕೆ ತಂಡ ಪ್ಲೇಆಫ್​ ಹಂತಕ್ಕೇರಬೇಕಾದರೆ ರನ್​ರೇಟ್​ನಲ್ಲೂ ಮೇಲುಗೈ ಸಾಧಿಸಬೇಕಾಗುತ್ತದೆ. ಇದರನ್ವಯ, ಸಿಎಸ್​ಕೆ ತಂಡ ತನ್ನ ಬಾಕಿ ಉಳಿದಿರುವ ಎಲ್ಲ 4 ಪಂದ್ಯಗಳನ್ನು ಜಯಿಸುವ ಜತೆಗೆ ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್, ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಗಳು ಬಾಕಿ ಉಳಿದಿರುವ 4 ಪಂದ್ಯಗಳ ಪೈಕಿ ಕನಿಷ್ಠ 1ರಲ್ಲಿ ಸೋಲು ಕಾಣಬೇಕು. ಜತೆಗೆ ಸನ್​ರೈಸರ್ಸ್ ಹೈದರಾಬಾದ್​ ತಂಡವೂ ಬಾಕಿ ಉಳಿದಿರುವ 5 ಪಂದ್ಯಗಳ ಪೈಕಿ 1ರಲ್ಲಿ ಸೋಲು ಕಾಣಬೇಕು. ಕೆಕೆಆರ್​ ತಂಡವೂ ಬಾಕಿ ಉಳಿದಿರುವ 4 ಪಂದ್ಯಗಳ ಪೈಕಿ ಕನಿಷ್ಠ 2ರಲ್ಲಿ ಸೋಲು ಕಾಣಬೇಕು. ಆಗ ಸಿಎಸ್​ಕೆ ಜತೆಗೆ ಈ 4 ತಂಡಗಳಿಗೂ ಗರಿಷ್ಠ 14 ಅಂಕ ಕಲೆಹಾಕುವ ಅವಕಾಶವಷ್ಟೇ ಇರುತ್ತದೆ. ಈ ಲೆಕ್ಕಾಚಾರ ಬಂದಾಗ ಸಿಎಸ್​ಕೆ ತಂಡ ರನ್​ರೇಟ್​ ಲೆಕ್ಕಾಚಾರದಲ್ಲಿ ಉಳಿದೆಲ್ಲ ತಂಡಗಳನ್ನು ಮೀರಿಸಿದರೆ ಪ್ಲೇಆಫ್​ ಹಂತಕ್ಕೇರಬಹುದಾಗಿದೆ.

ಇವೆಲ್ಲ ಪವಾಡಸದೃಶ ಬೆಳವಣಿಗೆಗಳು ಸಿಎಸ್​ಕೆ ತಂಡಕ್ಕೆ ಪೂರಕವಾಗಿ ಬಂದರೆ, ಐಪಿಎಲ್​ ಇತಿಹಾಸದಲ್ಲಿ ಒಮ್ಮೆಯೂ ಪ್ಲೇಆಫ್​ ಅಥವಾ ಸೆಮಿಫೈನಲ್​ ಪ್ರವೇಶ ತಪ್ಪಿಸಿಕೊಳ್ಳದಿರುವ ಚೆನ್ನೈ ಸೂಪರ್​ಕಿಂಗ್ಸ್​ ತಂಡದ ದಾಖಲೆ ಸುಭದ್ರವಾಗಿ ಉಳಿಯಲಿದೆ. ಇದೇ ರೀತಿ, ಸಿಎಸ್​ಕೆ ತಂಡ ಐಪಿಎಲ್​ ಆವೃತ್ತಿಯೊಂದರಲ್ಲಿ ಹಿಂದೆಂದೂ 7ಕ್ಕಿಂತ ಹೆಚ್ಚು ಸೋಲು ಕಂಡ ದೃಷ್ಟಾಂತವಿಲ್ಲ. ಒಂದು ವೇಳೆ ಈ ದಾಖಲೆ ಉಳಿಸಿಕೊಳ್ಳಲು ಸಾಧ್ಯವಾಗದೆ 8ನೇ ಸೋಲನ್ನು ಸಿಎಸ್​ಕೆ ತಂಡ ಎದುರು ನೋಡಿದರೆ, ಮೇಲಿನ ಯಾವ ಲೆಕ್ಕಾಚಾರಗಳೂ ಕೈಗೂಡದೆ ಸಿಎಸ್​ಕೆ ತಂಡ ಐಪಿಎಲ್​ ಇತಿಹಾಸದಲ್ಲಿ ಮೊದಲ ಬಾರಿಗೆ ಲೀಗ್​ ಹಂತದಲ್ಲೇ ನಿರ್ಗಮಿಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net