

ಮೆಲ್ಬೋರ್ನ್: ಆಸ್ಟ್ರೆಲಿಯಾದ ಯುವ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಪ್ರವಾಸಿ ಭಾರತ ವಿರುದ್ಧದ ಮಹತ್ವದ ಬಾರ್ಡರ್&ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಅವರು ಚೇತರಿಸಿಕೊಳ್ಳಲು ಕನಿಷ್ಠ 6 ತಿಂಗಳು ವಿಶ್ರಾಂತಿ ಅಗತ್ಯವೆನಿಸಿದೆ. ಇದರಿಂದಾಗಿ ನವೆಂಬರ್ 22ರಿಂದ ನಡೆಯಲಿರುವ 5 ಪಂದ್ಯಗಳ ಸರಣಿಯಿಂದ ಹೊರಗುಳಿಯಲಿದ್ದು, ಆತಿಥೇಯ ಆಸ್ಟ್ರೆಲಿಯಾ ತಂಡ ಭಾರಿ ಹಿನ್ನಡೆ ಎದುರಿಸಿದೆ.
25 ವರ್ಷದ ಗ್ರೀನ್ ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಭಾರತ ವಿರುದ್ಧದ ಸರಣಿ ಮಾತ್ರವಲ್ಲದೆ ಮುಂದಿನ ವರ್ಷದ ಶ್ರೀಲಂಕಾ ಪ್ರವಾಸ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನೂ ಗ್ರೀನ್ ತಪ್ಪಿಸಿಕೊಳ್ಳಲಿದ್ದಾರೆ. ಜತೆಗೆ ಐಪಿಎಲ್ನಲ್ಲೂ ಆಡುವುದು ಅನುಮಾನವೆನಿಸಿದೆ. ಕ್ಯಾಮರಾನ್ ಗ್ರೀನ್ ಆರ್ಸಿಬಿ ತಂಡದಲ್ಲಿರುವುದರಿಂದ ಇದು ಅದರ ಪಾಲಿಗೆ ಕೆಟ್ಟ ಸುದ್ದಿ ಎನಿಸಿದೆ. ಅಲ್ಲದೆ ಹರಾಜಿಗೆ ಮುನ್ನ ಗ್ರೀನ್ರನ್ನು ಉಳಿಸಿಕೊಳ್ಳಬೇಕೇ, ಬೇಡವೇ ಎಂಬ ಗೊಂದಲವೂ ಆರ್ಸಿಬಿ ತಂಡದಲ್ಲಿ ಎದುರಾಗಿದೆ.