ಯುಎಸ್​ ಓಪನ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಕನ್ನಡಿಗ ರೋಹನ್​ ಬೋಪಣ್ಣ

bopanna web
Published on

ನ್ಯೂಯಾರ್ಕ್​: ಭಾರತದ ಅನುಭವಿ ಆಟಗಾರ ಹಾಗೂ ಕನ್ನಡಿಗ ರೋಹನ್​ ಬೋಪಣ್ಣ, ಆಸ್ಟ್ರೆಲಿಯಾದ ಮ್ಯಾಥ್ಯೂ ಎಬ್ಡೆನ್​ ಜತೆಗೂಡಿ ವರ್ಷಾಂತ್ಯದ ಯುಎಸ್​ ಓಪನ್​ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿಯ ಪುರುಷರ ಡಬಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮೆರೆದಿದ್ದಾರೆ. 43 ವರ್ಷದ ಬೋಪಣ್ಣ ಮುಕ್ತ ಟೆನಿಸ್​ ಯುಗದಲ್ಲಿ ಗ್ರಾಂಡ್​ ಸ್ಲಾಂ ಟೂರ್ನಿಯ ಪುರುಷರ ಡಬಲ್ಸ್​ ವಿಭಾಗದಲ್ಲಿ ಫೈನಲ್​ಗೇರಿದ ಅತ್ಯಂತ ಹಿರಿಯ ಆಟಗಾರರೆಂಬ ದಾಖಲೆ ಬರೆದಿದ್ದಾರೆ.

6ನೇ ಶ್ರೇಯಾಂಕಿತ ಬೋಪಣ್ಣ-ಎಬ್ಡೆನ್​ ಜೋಡಿ ಗುರುವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಫ್ರಾನ್ಸ್​ನ ಹ್ಯೂಸ್​ ಹೆರ್ರ್ಬಟ್​ ಮತ್ತು ನಿಕೋಲಸ್​ ಮಹುತ್​ ಜೋಡಿಯನ್ನು 7-6 (7-3), 6-2 ನೇರಸೆಟ್​ಗಳಿಂದ ಮಣಿಸಿತು.

ಬೋಪಣ್ಣ ಗ್ರಾಂಡ್​ ಸ್ಲಾಂ ಟೂರ್ನಿಯ ಪುರುಷರ ಡಬಲ್ಸ್​ನಲ್ಲಿ 13 ವರ್ಷಗಳ ಬಳಿಕ ಮತ್ತು 2ನೇ ಬಾರಿಗೆ ಫೈನಲ್​ಗೇರಿದ ಸಾಧನೆ ಮಾಡಿದ್ದಾರೆ. ಅವರು ಈ ಮುನ್ನ 2010ರಲ್ಲಿ ಪಾಕಿಸ್ತಾನದ ಐಸಾಮ್​ ಉಲ್​ ಹಕ್​ ಖುರೇಷಿ ಜತೆ ಮೊದಲ ಬಾರಿ ಈ ಸಾಧನೆ ಮಾಡಿದ್ದರು.

ಕೆನಡದ ಡೇನಿಯಲ್​ ನೆಸ್ಟರ್​ 43 ವರ್ಷ 4 ತಿಂಗಳು ವಯಸ್ಸಿನಲ್ಲಿ ಗ್ರಾಂಡ್​ ಸ್ಲಾಂ ಟೂರ್ನಿಯ ಫೈನಲ್​ಗೇರಿದ್ದು ಹಿಂದಿನ ದಾಖಲೆ. ಬೋಪಣ್ಣ 43 ವರ್ಷ 6 ತಿಂಗಳು ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. ಟೂರ್ನಿಯ ಮಿಶ್ರ ಡಬಲ್ಸ್​ ವಿಭಾಗದಲ್ಲಿ ಈಗಾಗಲೆ ಬೋಪಣ್ಣ ಸವಾಲು ಅಂತ್ಯಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net