

ಹಾಂಗ್‌ರೆೌ: ಚಿನ್ನ ಪದಕ ಗೆಲ್ಲುವ ೇವರಿಟ್ ಎನಿಸಿದ್ದ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಯೂಕಿ ಬಾಂಬ್ರಿ ಜೋಡಿ ಏಷ್ಯಾಡ್ ಟೆನಿಸ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡಿದೆ. ಇದರೊಂದಿಗೆ ಬೋಪಣ್ಣ ಚಿನ್ನದ ಪದಕ ಉಳಿಸಿಕೊಳ್ಳುವ ಅವಕಾಶದಿಂದ ವಂಚಿತರಾಗಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಋತುಜಾ ಬೋಸ್ಲೆ ಜತೆಗೂಡಿ ಬೋಪಣ್ಣ 16ರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಸಾಕೇತ್ ಮೈನೇನಿ-ರಾಮ್ ಕುಮಾರ್ ರಾಮನಾಥನ್ ಕ್ವಾರ್ಟರ್‌ೈನಲ್‌ಗೇರಿದ್ದಾರೆ. ಸಿಂಗಲ್ಸ್‌ನಲ್ಲಿ ದೇಶದ ಅಗ್ರ ಶ್ರೇಯಾಂಕಿತೆ ಅಂಕಿತಾ ರೈನಾ, ರಾಮ್ ಕುಮಾರ್ ರಾಮನಾಥನ್ ಹಾಗೂ ಋತುಜಾ ಬೋಸ್ಲೆ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಪುರುಷರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ ಬೋಪಣ್ಣ-ಯೂಕಿ ಜೋಡಿ 2-6, 6-3, 10-6 ರಿಂದ ಕೆಳ ಶ್ರೇಯಾಂಕಿತ ಉಜ್ಬೇಕಿಸ್ತಾನದ ಸೆರ್ಗೆಯ್ ಫೋಮಿನ್-ಖುಮೊಯುನ್ ಸುಲ್ತಾನೋವ್ ಜೋಡಿಗೆ ಮಣಿಯಿತು. ಈ ಮೂಲಕ ಭಾರತಕ್ಕೆ ಪದಕದ ಭರವಸೆ ಎನಿಸಿದ್ದ ಜೋಡಿ ನಿರಾಸೆ ಅನುಭವಿಸಿದೆ. 43 ವರ್ಷದ ಬೋಪಣ್ಣ 2018ರಲ್ಲಿ ದಿವಿಜ್ ಶರಣ್ ಜತೆಗೂಡಿ ಚಿನ್ನದ ಪದಕ ಒಲಿಸಿಕೊಂಡಿದ್ದರು.
ಅಂಕಿತಾ ಶುಭಾರಂಭ: ಮಹಿಳೆಯರ ಸಿಂಗಲ್ಸ್‌ನಲ್ಲಿ 2018ರ ಕಂಚಿನ ಪದಕ ವಿಜೇತೆ ಅಂಕಿತಾ ರೈನಾ 6-0, 6-0 ರಿಂದ 17 ವರ್ಷದ ಸಬ್ರಿನಾ ಒಲಿಜೊನೊವಾ ಎದುರು ಜಯ ಸಾಧಿಸಿದರೆ, ಋತುಜಾ ಬೋಸ್ಲೆ 7-6,6-2 ರಿಂದ ಕಜಾಕ್‌ಸ್ತಾನದ ಸಗಂಧಿಕೊವಾರನ್ನು ಮಣಿಸಿ 16ರ ಘಟ್ಟಕ್ಕೇರಿದರು. ಪುರುಷರ ವಿಭಾಗದಲ್ಲಿ ರಾಮ್‌ಕುಮಾರ್ ರಾಮನಾಥನ್ ವಾಕ್ ಓವರ್ ಪಡೆದರು.