ಯುಎಸ್​ ಓಪನ್​ನಲ್ಲಿ ಕನ್ನಡಿಗ ರೋಹನ್​ ಬೋಪಣ್ಣಗೆ ಕೈತಪ್ಪಿದ ದಾಖಲೆಯ ಪ್ರಶಸ್ತಿ

bopanna web
Published on

ನ್ಯೂಯಾರ್ಕ್​: ಭಾರತದ ಅನುಭವಿ ಆಟಗಾರ ಹಾಗೂ ಕನ್ನಡಿಗ ರೋಹನ್​ ಬೋಪಣ್ಣ ವರ್ಷಾಂತ್ಯದ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ಯುಎಸ್​ ಓಪನ್​ನ ಪುರುಷರ ಡಬಲ್ಸ್​ ವಿಭಾಗದಲ್ಲಿ ಐತಿಹಾಸಿಕ ಪ್ರಶಸ್ತಿ ಒಲಿಸಿಕೊಳ್ಳುವುದರಿಂದ ಸ್ವಲ್ಪದರಲ್ಲಿ ವಂಚಿತರಾಗಿದ್ದಾರೆ. ಆಸ್ಟ್ರೆಲಿಯಾದ ಮ್ಯಾಥ್ಯೂ ಎಬ್ಡೆನ್​ ಜತೆಗೂಡಿ ಆಡಿದ 43 ವರ್ಷದ ಬೋಪಣ್ಣ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟರು. ಇದರಿಂದ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆದ್ದ ಅತಿ ಹಿರಿಯ ಆಟಗಾರ ಎಂಬ ದಾಖಲೆ ಬರೆಯುವ ಅವಕಾಶವನ್ನು ಕೈಚೆಲ್ಲಿದರು.

6ನೇ ಶ್ರೇಯಾಂಕಿತ ಬೋಪಣ್ಣ-ಎಬ್ಡೆನ್​ ಜೋಡಿ ಶುಕ್ರವಾರ ನಡೆದ ಫೈನಲ್​ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಆತಿಥೇಯ ಅಮೆರಿಕದ ರಾಜೀವ್​ ರಾಮ್​ ಮತ್ತು ಬ್ರಿಟನ್​ನ ಜೋಯಿ ಸಾಲಿಸ್​ಬರ್ರಿ ಜೋಡಿಯ ಎದುರು 6-2, 3-6, 4-6ರಿಂದ ಪರಾಭವಗೊಂಡರು. ಮೊದಲ ಸೆಟ್​ ಗೆದ್ದು ಶುಭಾರಂಭ ಕಂಡರೂ ನಂತರ ಲಯ ತಪ್ಪಿದ ಬೋಪಣ್ಣ ಜೋಡಿ 2 ಗಂಟೆಗಳ ಹೋರಾಟದಲ್ಲಿ ಶರಣಾಯಿತು.

ಗುರುವಾರವಷ್ಟೇ ಗ್ರಾಂಡ್​ ಸ್ಲಾಂ ಟೂರ್ನಿಯ ಫೈನಲ್​ಗೇರಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದ 43 ವರ್ಷ 6 ತಿಂಗಳು ವಯಸ್ಸಿನ ಬೋಪಣ್ಣ, ಪ್ರಶಸ್ತಿ ಗೆದ್ದ ಅತಿ ಹಿರಿಯರೆನಿಸಲು ಶಕ್ತರಾಗಲಿಲ್ಲ. 2022ರಲ್ಲಿ 40ನೇ ವಯಸ್ಸಿನಲ್ಲಿ ಫ್ರೆಂಚ್​ ಓಪನ್​ ಡಬಲ್ಸ್​ ಪ್ರಶಸ್ತಿ ಗೆದ್ದಿರುವ ನೆದರ್ಲೆಂಡ್​ನ ಜೀನ್​ ಜೂಲಿಯನ್​ ರೋಜರ್​ ಈ ದಾಖಲೆಯನ್ನು ಉಳಿಸಿಕೊಂಡಿದ್ದಾರೆ. ಬೋಪಣ್ಣ ಈ ಮುನ್ನ ವರ್ಷಾರಂಭದ ಆಸ್ಟ್ರೆಲಿಯನ್​ ಓಪನ್​ನಲ್ಲೂ ಸಾನಿಯಾ ಮಿರ್ಜಾ ಜತೆ ಆಡಿದಾಗ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net