ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಟ!

Stadium 21 Epril 20
Published on

ಮಹಾಮಾರಿ ಕರೊನಾ ಹಾವಳಿ ಶುರುವಾದ ಬಳಿಕ ಕಳೆದ ಒಂದೂವರೆ ತಿಂಗಳಿನಿಂದ ಬಹುತೇಕ ಕ್ರೀಡಾ ಚಟುವಟಿಕೆಗಳು ಸ್ಥಬ್ತಗೊಂಡಿವೆ. ಇದೀಗ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಾರದಿದ್ದರೂ, ಆರ್ಥಿಕ ಹೊಡೆತವನ್ನು ತಪ್ಪಿಸಿಕೊಳ್ಳಲು ಕ್ರೀಡಾ ಚಟುವಟಿಕೆಗಳನ್ನೂ ಪುನರಾರಂಭ ಮಾಡುವುದು ಅನಿವಾರ್ಯವೆನಿಸುತ್ತಿದೆ. ಆದರೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸುವುದು ಅತ್ಯಂತ ಅಪಾಯಕಾರಿ ಆಗಿರುವುದರಿಂದ, ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಾದರೂ ಪಂದ್ಯಗಳನ್ನು ನಡೆಸಬೇಕು ಎಂಬ ಒಲವು ಹೆಚ್ಚಾಗುತ್ತಿದೆ. ಯುರೋಪ್​ನಲ್ಲಿ ಪ್ರೇಕ್ಷಕರಿಲ್ಲದೆ ಫುಟ್​ಬಾಲ್ ಪಂದ್ಯ ಆಯೋಜಿಸಲು ಸಿದ್ಧತೆ ನಡೆಯುತ್ತಿದ್ದರೆ, ಕರೊನಾದಿಂದ ತತ್ತರಿಸಿರುವ ನಡುವೆಯೂ ಅಮೆರಿಕದಲ್ಲಿ ಪ್ರತಿಷ್ಠಿತ ಕ್ರೀಡಾ ಲೀಗ್​ಗಳನ್ನು ಪ್ರೇಕ್ಷಕರಿಲ್ಲದೆ ನಡೆಸುವ ಉತ್ಸಾಹ ಕಾಣಿಸಿದೆ. ಇದರಿಂದಾಗಿ ಟಿಕೆಟ್ ಮಾರಾಟದ ಆದಾಯ ನಷ್ಟವಾಗಬಹುದಾದರೂ, ಟಿವಿ ಮೂಲಕ ಕ್ರೀಡಾಪ್ರೇಮಿಗಳಿಗೆ ಕ್ರೀಡೆಯನ್ನು ತಲುಪಿಸಲಾಗುತ್ತದೆ. ಕ್ರಿಕೆಟ್​ನಲ್ಲೂ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಲು ಕ್ರಿಕೆಟಿಗರು ಸಿದ್ಧ ಎನ್ನುತ್ತಿದ್ದಾರೆ.

ಕರೊನಾ ಭೀತಿಯಿಂದ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವುದು ಅನಿವಾರ್ಯವಾಗಬಹುದು. ನಮಗೆಲ್ಲರಿಗೂ ಉತ್ಸಾಹಿ ಪ್ರೇಕ್ಷಕರ ಎದುರು ಆಡಿ ಅಭ್ಯಾಸವಾಗಿದೆ. ಹೀಗಾಗಿ ಇದನ್ನು ಆಟಗಾರರು ಹೇಗೆ ಸ್ವೀಕರಿಸುವರೆಂದು ಗೊತ್ತಿಲ್ಲ. ಆಟದಲ್ಲಿ ಛಲ ಕಡಿಮೆಯಾಗದು. ಆದರೆ, ಆಟಗಾರರು-ಪ್ರೇಕ್ಷಕರ ನಡುವಿನ ಸಂಪರ್ಕ ಇಲ್ಲವಾಗುತ್ತದೆ. ಆಟವನ್ನು ಅದರದೇ ರೀತಿಯಲ್ಲಿ ಆಡಿದರೂ, ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದಾಗ ಆಟಗಾರರು ಉತ್ಸಾಹ ತುಂಬಿ ಸೃಷ್ಟಿಸುವ ಮ್ಯಾಜಿಕ್ ಕ್ಷಣಗಳು ಮಿಸ್ ಆಗುತ್ತವೆ.

| ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ

ನಾನು ಖಾಲಿ ಸ್ಟೇಡಿಯಂನಲ್ಲಿ ರಣಜಿ ಪಂದ್ಯಗಳನ್ನು ಆಡಿರುವೆ. ಆದರೆ, ಪ್ರೇಕ್ಷಕರಿಲ್ಲದೆ ಐಪಿಎಲ್ ಪಂದ್ಯಗಳನ್ನು ಆಡುವುದು ನಿಜಕ್ಕೂ ವಿಭಿನ್ನವೆನಿಸುತ್ತದೆ. ಪ್ರೇಕ್ಷಕರ ಎದುರು ಆಡಿದಾಗ ನಮ್ಮಲ್ಲಿನ ಸ್ಪರ್ಧಾತ್ಮಕತೆಯೂ ಹೆಚ್ಚಿರುತ್ತದೆ. ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಆಡಿಸುವುದು ಜಾಣ ನಡೆ ಎನಿಸುತ್ತಿದೆ. ಜನರಿಗೆ ಅವರ ಮನೆಯಲ್ಲಾದರೂ ಕ್ರಿಕೆಟ್ ಮನರಂಜನೆ ಲಭಿಸುತ್ತದೆ.

| ಹಾರ್ದಿಕ್ ಪಾಂಡ್ಯ ಭಾರತದ ಆಲ್ರೌಂಡರ್

ಆಸ್ಟ್ರೇಲಿಯಾದಲ್ಲಿ ಕರೊನಾ ಭೀತಿ ಶುರುವಾದ ಬಳಿಕ ಖಾಲಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದು ಅಭ್ಯಾಸ ಪಂದ್ಯದಂಥ ಅನುಭವ ನೀಡಿತು. ಆದರೆ ಒಮ್ಮೆ ಇಂಥ ಅನುಭವಕ್ಕೆ ಹೊಂದಿಕೊಂಡ ಬಳಿಕ ಸ್ಪರ್ಧಾತ್ಮಕ ಪಂದ್ಯವನ್ನು ಆಡುವಾಗ ಯಾವುದೇ ವ್ಯತ್ಯಾಸ ಗೊತ್ತಾಗದು.

| ರಾಸ್ ಟೇಲರ್ ಕಿವೀಸ್ ಬ್ಯಾಟ್ಸ್​ಮನ್

ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆದರೂ ಸ್ಪಧಾತ್ಮಕತೆಗೆ ಕೊರತೆ ಇರಲಾರದು. ಪ್ರೇಕ್ಷಕರಿಲ್ಲದಿದ್ದರೂ, ದೇಶದ ಪರ ಆಡುವುದೇ ಮುಖ್ಯವಾಗಿರುತ್ತದೆ. ನಮ್ಮನ್ನು ಬೆಂಬಲಿಸುವ ಪ್ರೇಕ್ಷಕರಿಲ್ಲದೆ ಆಡುವುದು ನಿಜಕ್ಕೂ ಭಿನ್ನ ಅನುಭವ ನೀಡಲಿದೆ. ಕರೊನಾ ಭೀತಿ ಸಂಪೂರ್ಣವಾಗಿ ನಿವಾರಣೆಯಾಗುವವರೆಗೆ ಟಿವಿ ಮೂಲಕವೇ ಜನರಿಗೆ ಕ್ರೀಡೆಯನ್ನು ತಲುಪಿಸಬೇಕಾಗುತ್ತದೆ.

| ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಆಲ್ರೌಂಡರ್

ಪ್ರೇಕ್ಷಕರ ಹಷೋದ್ಗಾರದ ನಡುವೆ ಆಡಿ ಅನುಭವವಿರುವ ಆಟಗಾರರಿಗೆ ಖಾಲಿ ಸ್ಟೇಡಿಯಂನಲ್ಲಿ ಆಡುವುದು ನಿರಾಸೆ ತರುತ್ತದೆ. ಉತ್ತಮ ಹೊಡೆತವೊಂದನ್ನು ಬಾರಿಸಿದಾಗ ಪ್ರೇಕ್ಷಕರ ಗ್ಯಾಲರಿಯಿಂದ ಬರುವ ಹರ್ಷೆದ್ಗಾರ ಬ್ಯಾಟ್ಸ್​ಮನ್​ಗೆ ಇನ್ನಷ್ಟು ಶಕ್ತಿ ತುಂಬುತ್ತದೆ. ಬೌಲರ್​ಗೂ ಉತ್ತಮ ಸ್ಪೆಲ್ ಎಸೆದಾಗ ಪ್ರೇಕ್ಷಕರಿಂದ ಸಿಗುವ ಕರತಾಡನ, ಬ್ಯಾಟ್ಸ್​ಮನ್ ಮೇಲಿನ ಒತ್ತಡ ಹೆಚ್ಚಿಸಲು ಸಹಕಾರಿ. ಯಾವುದೇ ಕ್ರೀಡೆಗೆ ಪ್ರೇಕ್ಷಕರೂ ಪ್ರಮುಖ ಭಾಗವಾಗಿರುತ್ತಾರೆ.

| ಸಚಿನ್ ತೆಂಡುಲ್ಕರ್ ಕ್ರಿಕೆಟ್ ದಿಗ್ಗಜ

ಸುರಕ್ಷಿತವಾಗಿ ಕ್ರಿಕೆಟ್ ಪುನರಾರಂಭ ಮಾಡುವುದೇ ಮುಖ್ಯವಾಗಿದೆ. ಸ್ವಲ್ಪ ಸಮಯದವರೆಗೆ ಪ್ರೇಕ್ಷಕರಿಗೆ ಅವಕಾಶ ನೀಡುವುದು ಕಷ್ಟ. ಆದರೆ ಅವರು ಟಿವಿಯಲ್ಲಾದರೂ ಪಂದ್ಯ ನೋಡಲಿದ್ದಾರೆ. ಪ್ರೇಕ್ಷಕರ ಹರ್ಷೆದ್ಗಾರ ದಿಂದಾಗಿಯೇ ನಮಗೆ ಭಾರತದಲ್ಲಿ ಆಡುವುದು ಇಷ್ಟವಾಗುತ್ತದೆ. ಆದರೆ ಐಪಿಎಲ್​ನಂಥ ಟೂರ್ನಿ ಭಾರತದಲ್ಲಿ ಪ್ರೇಕ್ಷಕರಿಲ್ಲದೆ ನಡೆದರೂ ಯಶಸ್ಸು ಕಾಣುತ್ತದೆ.

|ಪ್ಯಾಟ್ ಕಮ್ಮಿನ್ಸ್ ಆಸೀಸ್ ವೇಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net