ಐಪಿಎಲ್​ 17ನೇ ಆವೃತ್ತಿಗೆ ಹಾರ್ದಿಕ್​ ಫಿಟ್​ ಆಗುವುದು ಅನುಮಾನ; ಮುಂಬೈ ಇಂಡಿಯನ್ಸ್​ಗೆ ಭಾರಿ ಹೊಡೆತದ ಭೀತಿ

hardik web
Published on

ಮುಂಬೈ: ಕಳೆದ ತಿಂಗಳು ಗುಜರಾತ್​ ಟೈಟಾನ್ಸ್​ ತಂಡದಿಂದ ವರ್ಗಾವಣೆಗೊಂಡಿದ್ದ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಇತ್ತೀಚೆಗೆ ಮುಂಬೈ ಇಂಡಿಯನ್ಸ್​ ತಂಡದ ನಾಯಕನ ಪಟ್ಟಕ್ಕೂ ಏರಿದ್ದರು. ಆದರೆ ಇದೀಗ ಅವರು ಐಪಿಎಲ್​ 17ನೇ ಆವೃತ್ತಿಯಲ್ಲಿ ಆಡುವುದೇ ಅನುಮಾನ ಎಂಬ ಸುದ್ದಿ ಹರಡಿದೆ. ತವರಿನಲ್ಲಿ ನಡೆದ ಕಳೆದ ಏಕದಿನ ವಿಶ್ವಕಪ್​ ವೇಳೆ ಕಾಲಿನ ಗಾಯಕ್ಕೊಳಗಾಗಿದ್ದ ಹಾರ್ದಿಕ್​ ಪಾಂಡ್ಯ ಐಪಿಎಲ್​ ವೇಳೆಗೆ ಫಿಟ್​ ಆಗುವುದು ಅನುಮಾನವೆನಿಸಿದೆ. ಇದು ಮುಂಬೈ ಇಂಡಿಯನ್ಸ್​ ತಂಡಕ್ಕೆ ಬಲುದೊಡ್ಡ ಹೊಡೆತ ನೀಡುವ ಭೀತಿ ಹುಟ್ಟಿಸಿದೆ.

ವಿಶ್ವಕಪ್​ನಲ್ಲಿ ಅಕ್ಟೋಬರ್​ 19ರಂದು ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದ ವೇಳೆ ತನ್ನದೇ ಬೌಲಿಂಗ್​ನಲ್ಲಿ ಬ್ಯಾಟರ್​ ನೇರವಾಗಿ ಹೊಡೆದ ಚೆಂಡನ್ನು ಕಾಲಿನಿಂದ ತಡೆಯುವ ಪ್ರಯತ್ನದಲ್ಲಿ ಹಾರ್ದಿಕ್​ ಪಾಂಡ್ಯ ಗಾಯಗೊಂಡಿದ್ದರು. ಬಳಿಕ ಆ ಪಂದ್ಯ ಮಾತ್ರವಲ್ಲದೆ ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದರು. ನಂತರದಲ್ಲಿ ಬೆಂಗಳೂರಿನ ಎನ್​ಸಿಎಯಲ್ಲಿ ಬಿಸಿಸಿಐ ವೈದ್ಯಕಿಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಬಲಪಾದದ ಅಸ್ಥಿರಜ್ಜುನಲ್ಲಿ ಮೂಡಿರುವ ಸಣ್ಣ ಬಿರುಕಿಗೆ 18 ವಾರಗಳ ಹೈ-ಪಾರ್ಮೆನ್ಸ್​ ಪ್ರೊಗ್ರಾಂ ಅನ್ವಯ ಚಿಕಿತ್ಸೆ ಪಡೆಯುತ್ತಿರುವ 30 ವರ್ಷದ ಹಾರ್ದಿಕ್​, ಮಾರ್ಚ್​ವರೆಗೂ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇಲ್ಲ. ನಂತರದಲ್ಲಿ ಬಿಸಿಸಿಐ ಹಸಿರು ನಿಶಾನೆ ಲಭಿಸಿದರೆ ಮಾತ್ರ ಅವರು ಐಪಿಎಲ್​ಗೆ ಲಭ್ಯರಾಗಲಿದ್ದಾರೆ.

ಕರ್ಮ ಕಾಡಿತು ಎಂದ ರೋಹಿತ್​ ಫ್ಯಾನ್ಸ್​​​!

ಇತ್ತೀಚೆಗೆ ಹಾರ್ದಿಕ್​ಗೆ ಮುಂಬೈ ನಾಯಕತ್ವ ನೀಡಿ, ರೋಹಿತ್​ ಶರ್ಮರನ್ನು ನಾಯಕತ್ವದಿಂದ ಕೆಳಗಿಳಿಸಿದಾಗ ಅವರ ಅಭಿಮಾನಿಗಳು ಸಿಟ್ಟಾಗಿದ್ದರು. ಇದೀಗ ಹಾರ್ದಿಕ್​ ಐಪಿಎಲ್​ ಆಡುವುದು ಅನುಮಾನ ಎಂಬ ಸುದ್ದಿ ಹರಡಿದ ಬೆನ್ನಲ್ಲೇ ರೋಹಿತ್​ ಅಭಿಮಾನಿಗಳು, ಅವರನ್ನೇ ಮತ್ತೆ ನಾಯಕರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿದ್ದಾರೆ. ಜತೆಗೆ ಹಾರ್ದಿಕ್​ ತನ್ನ "ಕರ್ಮ'ವನ್ನು ಎದುರಿಸುತ್ತಿದ್ದಾರೆ ಎಂದು ಟ್ರೋಲ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net