

ಬಾಮ್‌ಬೊಲಿಮ್: ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಬೆಂಗಳೂರು ಎಫ್ ಸಿ ತಂಡ, ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ತನ್ನ ಮೂರನೇ ಪಂದ್ಯದಲ್ಲಿ ದಕ್ಷಿಣ ಭಾರತದ ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈಯಿನ್ ಎಫ್ ಸಿ ತಂಡವನ್ನು ಎದುರಿಸಲಿದೆ. ಜಿಎಂಸಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯ ಬಿಎಫ್ ಸಿ ಪಾಲಿಗೆ ಮಹತ್ವ ಪಡೆದಿದೆ. ಮೊದಲೆರಡೂ ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿರುವ ಸುನೀಲ್ ಛೇಟ್ರಿ ಸಾರಥ್ಯದ ಬಿಎಫ್ ಸಿ ಗೆಲುವಿನ ಖಾತೆ ತೆರೆಯಲು ಹಂಬಲಿಸುತ್ತಿದೆ. ಹೈದರಾಬಾದ್ ಬಿಎಫ್ ಸಿ ಹಾಗೂ ಗೋವಾ ಬಿಎಫ್ ಸಿ ತಂಡಗಳ ಎದುರು ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. 2017ರ ಫೈನಲ್ ಪಂದ್ಯದಿಂದ ಎರಡು ತಂಡಗಳು ಸಾಂಪ್ರದಾಯಿಕ ಎದುರಾಳಿ ಎಂದು ಗುರುತಿಸಿಕೊಂಡಿವೆ. ಉತ್ತಮ ಆಟಗಾರರನ್ನು ಹೊಂದಿದ್ದರೂ ಗೆಲುವು ದಕ್ಕಿಸಿಕೊಳ್ಳಲು ಪರದಾಡುತ್ತಿರುವ ಬಿಎಫ್ ಸಿ ತಂಡಕ್ಕೆ ಗೆಲುವೊಂದೇ ಮಂತ್ರವಾಗಿದೆ. ಉಭಯ ತಂಡಗಳು ಇದುವರೆಗೂ 7 ಬಾರಿ ಮುಖಾಮುಖಿಯಾಗಿದ್ದು, ತಲಾ 3 ಬಾರಿ ಜಯ ದಾಖಲಿಸಿ ಒಮ್ಮೆ ಡ್ರಾ ಸಾಧಿಸಿವೆ.
ಪಂದ್ಯ ಆರಂಭ: ರಾತ್ರಿ 7.30; ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.