ಬೆಂಗಳೂರು ಬ್ಲಾಸ್ಟರ್ಸ್‌ ಮಣಿಸಿ ಸೆಮಿಫೈನಲ್‌ಗೇರಿದ ಶಿವಮೊಗ್ಗ ಲಯನ್ಸ್

slsl
Published on

ಬೆಂಗಳೂರು: ಟೂರ್ನಿಯ ದುಬಾರಿ ಆಟಗಾರ ಅಭಿನವ್ ಮನೋಹರ್ (58* ರನ್, 25 ಎಸೆತ, 2 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ನಾಯಕ ಶ್ರೇಯಸ್ ಗೋಪಾಲ್ (43 ರನ್ ಹಾಗೂ 25ಕ್ಕೆ1 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಶಿವಮೊಗ್ಗ ಲಯನ್ಸ್ ತಂಡ ಎರಡನೇ ಆವೃತ್ತಿಯ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಎದುರು 11 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ನಾಲ್ಕನೇ ಹಾಗೂ ಅಂತಿಮ ತಂಡವಾಗಿ ಸೆಮಿಫೈನಲ್ ಸ್ಥಾನ ಖಚಿತ ಪಡಿಸಿಕೊಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟ್‌ರ್ಸ್‌ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಶಿವಮೊಗ್ಗ ಲಯನ್ಸ್, ಶ್ರೇಯಸ್ ಗೋಪಾಲ್ ಹಾಗೂ ಅಭಿನವ್ ಮನೋಹರ್ ಜತೆಯಾಟದ ನೆರವಿನಿಂದ 5 ವಿಕೆಟ್‌ಗೆ 192 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಡಿ. ನಿಶ್ಚಲ್ (68 ರನ್, 40 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧತಶತಕದ ಹೊರತಾಗಿಯೂ, ಬೆಂಗಳೂರು ಬ್ಲಾಸ್ಟರ್ಸ್‌ ತಂಡ 8 ವಿಕೆಟ್‌ಗೆ 181 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಟೂರ್ನಿಗೆ ಸೋಲಿನ ವಿದಾಯ ಹೇಳಿತು.

ಶಿವಮೊಗ್ಗ ಲಯನ್ಸ್: 5 ವಿಕೆಟ್‌ಗೆ 192 (ರೋಹನ್ ಕದಂ 35, ನಿಹಾಲ್ 10, ವಿನಯ್ ಸಾಗರ್ 32, ಅಭಿನವ್ 58*, ಶ್ರೇಯಸ್ ಗೋಪಾಲ್ 43, ತನೀಶ್ ಮಹೇಶ್ 50ಕ್ಕೆ3).

ಬೆಂಗಳೂರು ಬ್ಲಾಸ್ಟರ್ಸ್‌: 8 ವಿಕೆಟ್‌ಗೆ 181 (ಜಾಸ್ಪರ್ 22, ಮಯಾಂಕ್ 14, ಡಿ. ನಿಶ್ಚಲ್ 68, ಪವನ್ 8, ಶುಭಾಂಗ್ 15, ಸೂರಜ್ 29, ಆದಿತ್ಯ ಸೋಮಣ್ಣ 24ಕ್ಕೆ2).

ಸೆಮಿಫೈನಲ್ಸ್

ಹುಬ್ಬಳ್ಳಿ ಟೈಗರ್ಸ್‌-ಶಿವನೊಗ್ಗ ಲಯನ್ಸ್

ಆರಂಭ: ಮಧ್ಯಾಹ್ನ 1

ಮೈಸೂರು ವಾರಿಯರ್ಸ್‌- ಗುಲ್ಬರ್ಗಾ ಮಿಸ್ಟಿಕ್ಸ್

ಆರಂಭ: ಸಂಜೆ 5.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net