

ಹಾಲಿ ಚಾಂಪಿಯನ್ ಹಾಗೂ ಪ್ರಶಸ್ತಿ ಉಳಿಸಿಕೊಳ್ಳುವ ಫೇವರಿಟ್ ಆಗಿರುವ ಪ್ರಜ್ಞೇಶ್ ಗುಣೇಶ್ವರನ್ ಮೂರು ಸೆಟ್ಗಳ ಹೋರಾಟದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ 16ರ ಘಟ್ಟಕ್ಕೇರಿದ್ದಾರೆ. ಅವರೊಂದಿಗೆ ರಾಮ್ಕುಮಾರ್ ರಾಮನಾಥನ್ ದೇಶಬಾಂಧವ ಆಟಗಾರನನ್ನು ಸೋಲಿಸುವ ಮೂಲಕ ಮುನ್ನಡೆ ಪಡೆದುಕೊಂಡರು.
ಕೆಎಸ್ಎಲ್ಟಿಎ ಕೋರ್ಟ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕಣದಲ್ಲಿದ್ದ ಭಾರತದ ಪ್ರಮುಖ ಸ್ಪರ್ಧಿಗಳು ಗೆಲುವು ಸಾಧಿಸಿದರು. ದಿನದ ಕೊನೆಯಲ್ಲಿ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ದೇಶದ ದಿಗ್ಗಜ ಆಟಗಾರ ಲಿಯಾಂಡರ್ ಪೇಸ್, ನೆರೆದಿದ್ದ ಸಾಕಷ್ಟು ಅಭಿಮಾನಿಗಳನ್ನು ರಂಜಿಸುವ ಮೂಲಕ ಸುಲಭ ಜಯದೊಂದಿಗೆ ಕ್ವಾರ್ಟರ್ಫೈನಲ್ ಪ್ರವೇಶ ಪಡೆದರು.
ಭಾರತದಲ್ಲಿ ವೃತ್ತಿಜೀವನದ ಕೊನೇ ಟೂರ್ನಿಯನ್ನು ಆಡುತ್ತಿರುವ ಲಿಯಾಂಡರ್ ಪೇಸ್, ಬಹುತೇಕ ಭರ್ತಿಯಾಗಿದ್ದ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಡ್ಬನ್ ಜತೆಗೂಡಿ 1 ಗಂಟೆ 21 ನಿಮಿಷದ ಮುಖಾಮುಖಿಯನ್ನು ಜಯಿಸಿದರು. 18 ಗ್ರಾಂಡ್ ಸ್ಲಾಂ ಡಬಲ್ಸ್ ಪ್ರಶಸ್ತಿ ಹಾಗೂ ಒಲಿಂಪಿಕ್ ಪದಕ ವಿಜೇತ ಪೇಸ್ ಹಾಗೂ ಎಡ್ಬನ್ ಜೋಡಿ 7-6 (2), 6-4 ರಿಂದ ಸ್ಲೋವೇನಿಯಾದ ಬ್ಲಾಜ್ ರೋಲಾ ಹಾಗೂ ಚೀನಾದ ಜಿಂಜಾನ್ ಜಾಂಗ್ ಜೋಡಿಯನ್ನು ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಸೆಮಿಫೈನಲ್ಗೇರಲು ಇಂಡೋ-ಆಸೀಸ್ ಜೋಡಿ ಸ್ವೀಡನ್ನ ಆಂಡ್ರೆ ಗೊರಾನ್ಸನ್ ಹಾಗೂ ಇಂಡೋನೇಷ್ಯಾದ ಕ್ರಿಸ್ಟೋಫರ್ ರುಂಗ್ಕಾಟ್ ಜೋಡಿಯನ್ನು ಎದುರಿಸಲಿದೆ. ಗೊರಾನ್ಸನ್ ಹಾಗೂ ರುಂಗ್ಕಾಟ್ ಜೋಡಿ ಮೊದಲ ಸುತ್ತಿನಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಹಾಗೂ ಸುಮಿತ್ ನಗಾಲ್ ಜೋಡಿಯನ್ನು ಸೋಲಿಸಿತು.
ದಿನದ ಆರಂಭದಲ್ಲಿ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಮ್ಯಾಥ್ಯೂ ಎಡ್ಬನ್ ಅಂದಾಜು 3 ಗಂಟೆಗಳ ಕಾಲ ನಡೆದ ಹೋರಾಟದಲ್ಲಿ ಈಜಿಪ್ಟ್ನ ಮೊಹಮದ್ ಸಾಫ್ವಟ್ ವಿರುದ್ಧ ಸೋಲು ಕಂಡಿದ್ದರು. ಇದರ ಆಯಾಸವನ್ನು ಡಬಲ್ಸ್ ಪಂದ್ಯದಲ್ಲಿ ಒಂಚೂರು ತೋರಿಸಿಕೊಳ್ಳದ ಎಡ್ಬನ್, ಪೇಸ್ರ ಅನುಭವಿ ಆಟಕ್ಕೆ ಅಗತ್ಯ ಸಾಥ್ ನೀಡುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು.
ಪ್ರಜ್ಞೇಶ್, ರಾಮ್ ಮುನ್ನಡೆ: ಭಾರತದ ಅಗ್ರ ರ್ಯಾಂಕಿಂಗ್ನ ಸಿಂಗಲ್ಸ್ ಆಟಗಾರ, 7ನೇ ಶ್ರೇಯಾಂಕದ ಪ್ರಜ್ಞೇಶ್ ಗುಣೇಶ್ವರನ್ ದಿನದ ಮೊದಲ ಪಂದ್ಯದಲ್ಲಿ ಜರ್ಮನಿಯ ಸೆಬಾಸ್ಟಿಯನ್ ಫ್ಯಾನ್ಸೀಲೋವರನ್ನು 6-2, 4-6, 6-4 ರಿಂದ ಸೋಲಿಸಿದರು. 16ರ ಘಟ್ಟದ ಪಂದ್ಯದಲ್ಲಿ ಪ್ರಜ್ಞೇಶ್, ಫ್ರಾನ್ಸ್ನ ಬೆಂಜಮಿನ್ ಬೊಂಜಿ ಸವಾಲನ್ನು ಎದುರಿಸಲಿದ್ದಾರೆ. 17ನೇ ಶ್ರೇಯಾಂಕದ ಆಟಗಾರ ರಾಮ್ುಮಾರ್ 6-1, 6-3ರಿಂದ ಅರ್ಹತಾ ಸುತ್ತಿನಿಂದ ಬಂದ ಆಟಗಾರ ಅಭಿನವ್ ಷಣ್ಮುಗಂರನ್ನು ಸೋಲಿಸಿದರೆ, ಸಿದ್ಧಾರ್ಥ್ ರಾವತ್, ಲಕ್ಕಿ ಲೂಸರ್ ರಿಷಿ ರೆಡ್ಡಿಯನ್ನು 6-2, 6-2ರಿಂದ ಸೋಲಿಸಿ ಮುನ್ನಡೆದರು.
10ನೇ ಶ್ರೇಯಾಂಕದ ಆಟಗಾರ ಚೀನಾದ ಜಿಂಜಾನ್ ಜಾಂಗ್, ಇಟಲಿಯ ಜೂಲಿಯನ್ ಒಕ್ಲೆಪ್ಪೋ ಎದುರು ಆಘಾತ ಕಂಡರು. 55 ನಿಮಿಷದ ಆಟದಲ್ಲಿ ಒಕ್ಲೆಪ್ಪೋ 6-1, 6-3 ರಿಂದ ಗೆಲುವು ಸಾಧಿಸಿದರು. ಬೆಂಜಮಿಂನ್ ಬೊಂಜಿ 6-4, 6-1 ರಿಂದ 12ನೇ ಶ್ರೇಯಾಂಕದ ಆಟಗಾರ ಸೆರ್ಬಿಯಾದ ನಿಕೋಲಾ ಮಿಲೋಜೆವಿಕ್ರನ್ನು ಸೋಲಿಸಿ ಮುನ್ನಡೆದರು. ದಿನದ ಕೊನೆಯಲ್ಲಿ 15ನೇ ಶ್ರೇಯಾಂಕದ ಆಟಗಾರ ಬೆಲ್ಜಿಯಂನ ಕ್ರಿಮ್ಮೆರ್ ಕೊಪೆಜಾನ್ಸ್ ಕೂಡ ಆಘಾತಕಾರಿ ನಿರ್ಗಮನ ಕಂಡರು. 2 ಗಂಟೆ 20 ನಿಮಿಷದ ಹೋರಾಟದಲ್ಲಿ ಪೋರ್ಚುಗಲ್ನ ಆಟಗಾರ ಫೆಡ್ರಿಸಿಯೋ ಫೆರಿರಾ ಸಿಲ್ವಾ 3-6, 6-3, 5-7 ರಿಂದ ಕೊಪೆಜಾನ್ಸ್ರನ್ನು ಟೂರ್ನಿಯಿಂದ ಹೊರಹಾಕಿದರು.
ಮ್ಯಾಥ್ಯೂ ಎಡ್ಬನ್ ಬಹಳ ಉತ್ತಮವಾಗಿ ಆಡಿದರು. ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಮೂರು ಸೆಟ್ಗಳ ಪಂದ್ಯವಾಡಿದ್ದ ಅವರು, ಬುಧವಾರ ನಡೆದ 2ನೇ ಸುತ್ತಿನಲ್ಲೂ 3 ಗಂಟೆಗಳ ಕಾಲ ಗೆಲುವಿಗೆ ಹೋರಾಟ ನಡೆಸಿದ್ದರು. ಅದರ ಬೆನ್ನಲ್ಲಿಯೇ ಡಬಲ್ಸ್ ಪಂದ್ಯ ಆಡುವುದು ಸುಲಭವಾಗಿರಲಿಲ್ಲ. ಅವರ ಆಟ ನನಗೆ ಇನ್ನಷ್ಟು ಉತ್ಸಾಹ ನೀಡಿತು. ಡಬಲ್ಸ್ನಲ್ಲಿ ನನಗೆ ಅವರು 135ನೇ ಜತೆಗಾರ. | ಲಿಯಾಂಡರ್ ಪೇಸ್
| ಸಂತೋಷ್ ನಾಯ್ಕ್, ಬೆಂಗಳೂರು