

RCB| ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾತೃಭಾಷೆ ಗೊತ್ತಿರದ ತನ್ನ ಅಭಿಮಾನಿಗಳಿಗೆ ಕನ್ನಡವನ್ನು ಕಲಿಸಲು ಹೊಸ ಅಭಿಯಾನವನ್ನು ಆರಂಭಿಸಿದೆ. ಹೆಚ್ಚಿನ ಅಭಿಮಾನಿಗಳನ್ನು ಸೆಳೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ವಿಭಿನ್ನವಾಗಿ ಸಾಂಸ್ಕೃತಿಕ ಅಭಿಯಾನಕ್ಕೆ ಮುನ್ನುಡಿ ಬರೆದಿದೆ. ಕನ್ನಡ ಗೊತ್ತಿರದ ತನ್ನ ಅಭಿಮಾನಿಗಳಿಗೆ ಸಾಧ್ಯವಾದಷ್ಟು ಕನ್ನಡವನ್ನು ಕಲಿಸುವ ಗುರಿ ಹೊಂದಿದೆ.
ಕನ್ನಡ ಲಿಪಿಯ ಆಕಾರಗಳಲ್ಲಿ ವಿನ್ಯಾಸಗೊಳಿಸಲಾದ ಖಾದ್ಯ ಜಿಲೇಬಿಗಳು ಬೆಂಗಳೂರಿನಲ್ಲಿರುವ ಆರ್‌ಸಿಬಿ ಬಾರ್ & ಕೆಫೆಯಲ್ಲಿ ಏಪ್ರಿಲ್ 8ರಿಂದ 11 ರವರೆಗೆ ಲಭ್ಯವಿರಲಿವೆ. ಪ್ರತಿಯೊಂದು ಪ್ಯಾಕ್ ಸ್ಕ್ಯಾನ್ ಮಾಡಬಹುದಾದ ಕೋಡ್ಅನ್ನು ಒಳಗೊಂಡಿವೆ. ಈ ಬಗ್ಗೆ ಆರ್‌ಸಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಕನ್ನಡ ಕಲಿಕೆಯ ವೀಡಿಯೊಗಳನ್ನು ಬಿಡುಗಡೆ ಮಾಡಲಾಗಿದೆ. ಜಿಲೇಬಿ ಪ್ಯಾಕ್‌ಅನ್ನು ಸ್ಕ್ಯಾನ್ ಮಾಡುವ ಮೂಲಕ ಆರ್‌ಸಿಬಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಕನ್ನಡ ಪಾಠಗಳ ಸರಣಿಯನ್ನ ವೀಕ್ಷಿಸಬಹುದಾಗಿದೆ.
ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಯಶ್ ದಯಾಳ್, ಟಿಮ್ ಡೇವಿಡ್, ಮುಂತಾದವರ ಬಾಯಿಂದಲೇ ಕನ್ನಡ ಪದಗಳನ್ನ ಕೇಳಿ ಕಲಿಯಬಹುದಾಗಿದೆ. ಆರ್‌ಸಿಬಿ ಆಯೋಜಿಸಿರುವ ಈ ಕನ್ನಡ ಪಾಠ ಕಲಿಯಲು ಅಭಿಮಾನಿಗಳು "ಜಿಲೇಬಿ ಕೊಡಿ" ಎಂದು ಟೈಪ್ ಮಾಡಿ jilebikodi@gmail.comಗೆ ಇಮೇಲ್ ಮಾಡಬೇಕು ಎಂದು ಫ್ರಾಂಚೈಸಿ ತಿಳಿಸಿದೆ.
ಇನ್ನೂ ಈ ಜಿಲೇಬಿ ಅಭಿಯಾನದ ಬಗ್ಗೆ ಪಡಿಕ್ಕಲ್ ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ಬೆಳೆದವನಾಗಿ, ಕನ್ನಡವನ್ನ ಹೀಗೆ ನೋಡುವುದು ನಿಜಕ್ಕೂ ವಿಶೇಷ ಅನುಭವವಾಗಿದೆ ಎಂದು ಆರ್‌ಸಿಬಿ ತಂಡದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಹೇಳಿದ್ದಾರೆ. ಇದು ಕನ್ನಡದ ಬಗ್ಗೆ ಮಾತ್ರವಲ್ಲ, ಎಲ್ಲರೂ ತಮ್ಮದೇ ಮನೆಯಲ್ಲಿರುವಂತೆ ಮಾಡಲಿದೆ. ನಮ್ಮ ಅಭಿಮಾನಿಗಳು, ನಮ್ಮ ಬೆಂಗಳೂರು ಹಾಗೂ ನಮ್ಮ ತಂಡದೊಂದಿಗೆ ಹೆಚ್ಚು ಆಳವಾದ ಸಂಪರ್ಕ ಸಾಧಿಸಲು ನಾನು ಈ ಸಣ್ಣ ಪಾತ್ರವನ್ನ ನಿರ್ವಹಿಸುತ್ತಿರುವುದಕ್ಕೆ ಸಂತೋಷಪಡುತ್ತೇನೆ ಎಂದು ಪಡಿಕ್ಕಲ್ ತಿಳಿಸಿದ್ದಾರೆ.
ಇದು ಕೇವಲ ಮಾರ್ಕೆಟಿಂಗ್ ಗಿಮಿಕ್ ಅಲ್ಲ, ಬದಲಾಗಿ ತನ್ನ ವೈವಿಧ್ಯಮಯ ಅಭಿಮಾನಿ ಬಳಗದೊಂದಿಗೆ ಆಳವಾದ ಭಾವನಾತ್ಮಕ ಸಂಪರ್ಕಗಳನ್ನು ನಿರ್ಮಿಸುವ ವಿಶಾಲ ಪ್ರಯತ್ನವಾಗಿದೆ ಎಂದು ಆರ್‌ಸಿಬಿ ತಂಡ ಹೇಳಿದೆ.
ಕನ್ನಡ ಲಿಪಿಯನ್ನು ಸಿಹಿತಿಂಡಿಯಾಗಿ ಪರಿವರ್ತಿಸುವ ಮೂಲಕ, ನಾವು ಅಭಿಮಾನಿಗಳು ನಮ್ಮ ಭಾಷೆಯನ್ನು ಅಕ್ಷರದಲ್ಲಿ ಸವಿಯಲು ಆಹ್ವಾನಿಸುತ್ತಿದ್ದೇವೆ ಎಂದು ಆರ್‌ಸಿಬಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜೇಶ್ ಮೆನನ್ ಹೇಳಿದ್ದಾರೆ.
(ಏಜೆನ್ಸೀಸ್)