

ಮಾರ್ಗೊವಾ: ಆರಂಭಿಕ ಮುನ್ನಡೆ ನಡುವೆಯೂ ಕಡೇ ಐದು ನಿಮಿಷ ನೀರಸ ನಿರ್ವಹಣೆ ತೋರಿದ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಮತ್ತೊಮ್ಮೆ ಡ್ರಾಕ್ಕೆ ತೃಪ್ತಿಪಟ್ಟುಕೊಂಡಿತು. ತಿಲಕ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಎಫ್ ಸಿ ತಂಡ 2-2 ಗೋಲುಗಳಿಂದ ಹೈದರಾಬಾದ್ ಎಫ್ ಸಿ ಎದುರು ಡ್ರಾ ಸಾಧಿಸಿತು. ಪಂದ್ಯದ 86ನೇ ನಿಮಿಷದವರೆಗೂ 2-0 ಗೋಲುಗಳಿಂದ ಮುನ್ನಡೆ ಸಾಧಿಸಿ ಗೆಲುವಿನ ಹಾದಿಯಲ್ಲಿದ್ದ ಬಿಎಫ್ ಸಿ ಕಡೇ ನಿಮಿಷಗಳಲ್ಲಿ ಎದುರಾಳಿ ತಂಡದಿಂದ ತಿರುಗೇಟು ಅನುಭವಿಸಿತು. ಇದರಿಂದ ಲೀಗ್‌ನಲ್ಲಿ ಸತತ 8ನೇ ಪಂದ್ಯದಲ್ಲಿ ಜಯ ದಾಖಲಿಸಲು ವಿಲವಾಯಿತು. ಕಡೇ 8 ಪಂದ್ಯಗಳಲ್ಲಿ 3 ಡ್ರಾ ಹಾಗೂ 5 ಸೋಲನುಭವಿಸಿದೆ.
ಪಂದ್ಯದ 9ನೇ ನಿಮಿಷದಲ್ಲೇ ನಾಯಕ ಸುನೀಲ್ ಛೇಟ್ರಿ ಹೆಡ್ಡರ್ ಮೂಲಕ ಬಾರಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಬಿಎಫ್ ಸಿ ಮೊದಲಾರ್ಧದಲ್ಲಿ 1-0 ಯಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದ ಆರಂಭಗೊಂಡ 11 ನಿಮಿಷಗಳ ಬಳಿಕ ಬಿಎಫ್ ಸಿ ತಂಡದ ಲಿಯೊನ್ ಅಗಸ್ಟಿನ್ (61ನೇ ನಿಮಿಷ) ಏಕಾಂಗಿ ನಿರ್ವಹಣೆಯೊಂದಿಗೆ ಗೋಲು ಬಾರಿಸಿ ಗೋಲಿನ ಅಂತರ ಹಿಗ್ಗಿಸಿದರು. ಇದರಿಂದ ಬಿಎಫ್ ಸಿ ತಂಡ ಸುಲಭ ಗೆಲುವಿನ ಹಾದಿ ಹಿಡಿಯಿತು.
ಬಿಎಫ್ ಸಿ ಮುಂದಿನ ಎದುರಾಳಿ: ಈಸ್ಟ್ ಬೆಂಗಾಲ್ ಎಸ್‌ಸಿ, ಯಾವಾಗ: ಮಂಗಳವಾರ
ಕಡೇ ಹಂತದಲ್ಲಿ ಬಿಎಫ್ ಸಿ ತಂಡದ ರಕ್ಷಣಾತ್ಮಕ ಕೋಟೆ ಬೇದಿಸಿದ ಹೈದರಾಬಾದ್ ತಂಡದ ಅಡ್ರಿಡೇನ್ ಸನಾತನ (86) ಗೋಲು ಬಾರಿಸಿದರು. ಪಂದ್ಯ ಕಡೇ ನಿಮಿಷದಲ್ಲಿ ಹೈದರಾಬಾದ್ ತಂಡದ ಫ್ರಾನ್ಸಿಸ್ಕೋ ಸಂದಾಜ (90) ಗೋಲು ಬಾರಿಸಿ ಪಂದ್ಯದಲ್ಲಿ ಸಮಬಲ ಸಾಧಿಸಲು ನೆರವಾದರು. ಇಂಜುರಿ ವೇಳೆಯಲ್ಲೂ ಹೈದರಾಬಾದ್ ತಂಡವೇ ಆಕ್ರಮಣಕಾರಿ ನಿರ್ವಹಣೆ ಮೂಲಕ ಗಮನಸೆಳೆಯಿತು.