ಬೆಂಗಳೂರು ಎಫ್ ಸಿ ತಂಡ ತೊರೆದ ಮುಖ್ಯಕೋಚ್ ಕಾರ್ಲೆಸ್ ಕ್ವಾಡ್ರಾತ್

bfc and coach for web
Published on

ಬೆಂಗಳೂರು: ಬೆಂಗಳೂರು ಎಫ್ ಸಿ ಮುಖ್ಯಕೋಚ್ ಕಾರ್ಲೆಸ್ ಕ್ವಾಡ್ರಾತ್ ಸ್ವಯಂ ಪ್ರೇರಿತರಾಗಿ ತಂಡದಿಂದ ಹೊರ ನಡೆದಿದ್ದಾರೆ ಎಂದು ಕ್ಲಬ್ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳವಾರ ನಡೆದ ಐಎಸ್‌ಎಲ್ ಪಂದ್ಯದಲ್ಲಿ ಮುಂಬೈ ಸಿಟಿ ತಂಡಕ್ಕೆ ಶರಣಾಗುವ ಮೂಲಕ ಬಿಎಫ್ ಸಿ ಲೀಗ್‌ನಲ್ಲಿ ಹ್ಯಾಟ್ರಿಕ್ ಸೋಲಿನ ರುಚಿ ಕಂಡಿತ್ತು. ಇದರ ಬೆನ್ನಲ್ಲೇ ಮುಖ್ಯಕೋಚ್ ತಂಡದಿಂದ ಹೊರನಡೆದಿದ್ದಾರೆ. ಕಾರ್ಲೆಸ್‌ಗೆ ಇದು ಬಿಎಫ್ ಸಿ ಜತೆ ಐದನೇ ಆವೃತ್ತಿಯಾಗಿತ್ತು. ಆರಂಭಿಕ ಎರಡು ವರ್ಷಗಳ ಕಾಲ ಅಲ್ಬರ್ಟ್ ರೊಕಾ ಜತೆ ಸಹಾಯಕ ಕೋಚ್ ಆಗಿದ್ದ ಕಾರ್ಲೆಸ್, ಕಳೆದ ಮೂರು ಆವೃತ್ತಿಗಳಿಂದ ತಂಡದ ಮುಖ್ಯಕೋಚ್ ಆಗಿದ್ದರು.

ಇದೀಗ ಕಾರ್ಲೆಸ್ ಕ್ವಾಡ್ರಾತ್ ನಿರ್ಗಮನದಿಂದಾಗಿ ನೌಶಾದ್ ಮೂಸಾ ಅವರನ್ನು ಹಂಗಾಮಿ ಮುಖ್ಯಕೋಚ್ ಆಗಿ ನೇಮಿಸಲಾಗಿದೆ. ‘ಕ್ಲಬ್‌ಗೆ ಹೊಸತನ ಬೇಕಾಗಿದೆ. ತಂಡದ ಉತ್ತಮ ದಿನಗಳು ಮರುಕಳಿಸಬೇಕೆಂಬ ಉದ್ದೇಶದಿಂದ ಕೆಲವೊಂದು ಬದಲಾವಣೆ ಅಗತ್ಯ. ಕಾರ್ಲೆಸ್ ತಂಡದೊಂದಿಗೆ ಉತ್ತಮ ದಿನಗಳನ್ನು ಹಂಚಿಕೊಂಡಿದ್ದಾರೆ’ ಎಂದು ಬಿಎಫ್ ಸಿ  ನಿರ್ದೇಶಕ ಪಾರ್ಥ್ ಜಿಂದಾಲ್ ಹೇಳಿದ್ದಾರೆ.

ಶನಿವಾರ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯ ನೌಶಾದ್ ಮೂಸಾಗೆ ಮೊದಲ ಸವಾಲಾಗಿದೆ. ಕಾರ್ಲೆಸ್ ಕ್ವಾಡ್ರಾತ್ ಮಾರ್ಗದರ್ಶನದಲ್ಲಿಯೇ ಬೆಂಗಳೂರು ತಂಡ ಚಾಂಪಿಯನ್ ಆಗಿತ್ತು. ಲೀಗ್ ಹಂತದಲ್ಲಿ ಅಗ್ರಸ್ಥಾನಕ್ಕೇರಿ, ಚಾಂಪಿಯನ್‌ಪಟ್ಟ ಅಲಂಕರಿಸಿದ ಐಎಸ್‌ಎಲ್ ಇತಿಹಾಸದ ಮೊದಲ ತಂಡ ಎನಿಸಿಕೊಂಡಿದೆ. ಅಲ್ಲದೆ, ಸತತ 6 ಗೆಲುವು ಹಾಗೂ ಸತತ 11 ಪಂದ್ಯಗಳಲ್ಲಿ ಅಜೇಯ ಸಾಧನೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net