ಬಿಎಫ್​ಸಿಗೆ ಮಾಜಿಯಾ ಎದುರಾಳಿ: ಎಎಫ್​ಸಿ ಕಪ್ ಪ್ಲೇ ಆಫ್ ಸುತ್ತು, ಗೆಲುವಿನ ವಿಶ್ವಾಸದಲ್ಲಿ ಬೆಂಗಳೂರು

SP
Published on

ಮಾಲೆ(ಮಾಲ್ಡಿವ್ಸ್): ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಚಾಂಪಿಯನ್ ಬೆಂಗಳೂರು ಎಫ್​ಸಿ ತಂಡ 2020 ಎಎಫ್​ಸಿ ಕಪ್ ಪ್ಲೇ ಆಫ್ ಸುತ್ತಿನ ಮೊದಲ ಚರಣದ ಪಂದ್ಯದಲ್ಲಿ ಮಾಲ್ಡಿವ್ಸ್​ನ ಮಾಜಿಯಾ ಆರ್​ಸಿ ತಂಡವನ್ನು ಎದುರಿಸಲಿದೆ. ಎರಡು ಚರಣದ ಪಂದ್ಯ ಇದಾಗಿದ್ದು, ಜಯ ದಾಖಲಿಸುವ ತಂಡ ಎಎಫ್​ಸಿ ಕಪ್ ಗುಂಪು ಹಂತಕ್ಕೆ ಅರ್ಹತೆ ಪಡೆಯಲಿದೆ.

ಮಾಲ್ಡಿವ್ಸ್ ರಾಷ್ಟ್ರೀಯ ಫುಟ್​ಬಾಲ್ ಸ್ಟೇಡಿಯಂನಲ್ಲಿ ಬುಧವಾರ ಪಂದ್ಯ ನಡೆಯಲಿದ್ದು, ಬಿಎಫ್​ಸಿ ಜಯದ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಭೂತಾನ್​ನ ಪಾರು ಎಫ್​ಸಿ ತಂಡವನ್ನು 10-1 ಗೋಲು ಸರಾಸರಿಯ ದೊಡ್ಡ ಅಂತರದಲ್ಲಿ ಮಣಿಸಿತ್ತು. ಆದರೆ, ಮಾಲ್ಡಿವ್ಸ್​ನ ಅತಿಯಾದ ಬಿಸಿಲಿನ ವಾತಾವರಣದಲ್ಲಿ ಮಾಜಿಯಾ ವಿರುದ್ಧ ಗೆಲುವಿಗಾಗಿ ಬಿಎಫ್​ಸಿ ದೊಡ್ಡ ಮಟ್ಟದ ಪರಿಶ್ರಮ ಹಾಕಬೇಕಿದೆ ಎಂದು ಕೋಚ್ ಕಾರ್ಲಸ್ ಕ್ಲೌಡ್ರಟ್ ಹೇಳಿದ್ದಾರೆ.

ಬಿಎಫ್​ಸಿ ತಂಡ ಎಎಫ್​ಸಿ ಟೂರ್ನಿಯಲ್ಲಿ ತನ್ನ ಮೊದಲ ಗೆಲುವನ್ನು ಮಾಜಿಯಾ ವಿರುದ್ಧವೇ ದಾಖಲಿಸಿತ್ತು. ‘ಮಾಜಿಯಾ ವಿರುದ್ಧದ ಗೆಲುವು ನನಗೆ ಇನ್ನೂ ನೆನಪಿದೆ. 2017ರಲ್ಲಿ ನಾವು ನ್ಯೂ ರೇಡಿಯಂಟ್ ತಂಡಕ್ಕೆ ಸೋತಿದ್ದೆವು. ಪಾರು ಎಫ್​ಸಿ ವಿರುದ್ಧದ ದೊಡ್ಡ ಗೆಲುವಿನ ವಿಶ್ವಾಸ ನಮ್ಮಲ್ಲಿದೆ. ಆದರೆ, ಮಾಲ್ಡಿವ್ಸ್​ನಲ್ಲಿ ಹಿಂದಿನ ಪಂದ್ಯಗಳ ಫಲಿತಾಂಶಗಳು ಲೆಕ್ಕಕ್ಕೆ ಬರುವುದಿಲ್ಲ’ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪಂದ್ಯದಲ್ಲಿ ನಾವು ಫೇವರಿಟ್​ಗಳಲ್ಲ ಎಂದ ಕ್ಲೌಡ್ರಟ್, ಆ ದಿನದಲ್ಲಿ ಯಾವ ತಂಡ ಉತ್ತಮ ನಿರ್ವಹಣೆ ತೋರುತ್ತದೆಯೋ ಅದು ಗೆಲುವಿಗೆ ಅರ್ಹವಾಗಿರುತ್ತದೆ ಎಂದಿದ್ದಾರೆ. ಮಾರ್ಜನ್ ಸೆಕುಲೊವಸ್ಕಿ ತರಬೇತಿಯ ಮಾಜಿಯಾ, ಬಾಂಗ್ಲಾದೇಶದ ಚಾಂಪಿಯನ್ ತಂಡ ಅಭಹಾನಿ ಢಾಕಾವವನ್ನು ಮಣಿಸಿ ಪ್ಲೇಆಫ್ ಹಂತಕ್ಕೆ

ಅರ್ಹತೆ ಪಡೆದಿದೆ.

ಪಂದ್ಯ ಆರಂಭ: ಸಂಜೆ 4.30

ಸುನೀಲ್ ಛೇಟ್ರಿ ಇಲ್ಲ

ಮಾಂಸಖಂಡದ ಗಾಯಕ್ಕೆ ತುತ್ತಾಗಿರುವ ಸುನೀಲ್ ಛೇಟ್ರಿ ಈ ಪಂದ್ಯಕ್ಕೆ ಲಭ್ಯರಿಲ್ಲ. ಮಿಡ್​ಫೀಲ್ಡರ್ ಸುರೇಶ್ ವಾಂಗ್​ಜಾಮ್ ಪಾರು ಎಫ್​ಸಿ ವಿರುದ್ಧದ ಎರಡೂ ಚರಣದ ಪಂದ್ಯದಲ್ಲಿ ಹಳದಿ ಕಾರ್ಡ್ ಪಡೆದಿರುವ ಕಾರಣ ಈ ಪಂದ್ಯದಲ್ಲಿ ಆಡುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net