ಬೆಂಗಳೂರು ಬುಲ್ಸ್ ಗೆಲುವಿನ ಓಟಕ್ಕೆ ಪಟನಾ ಪೈರೇಟ್ಸ್ ಬ್ರೇಕ್

pro kabaddi bulls match for web
Published on

ಬೆಂಗಳೂರು: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಟನಾ ಪೈರೇಟ್ಸ್ ತಂಡಕ್ಕೆ ಶರಣಾಯಿತು. ಭಾನುವಾರ ನಡೆದ ಪಂದ್ಯದಲ್ಲಿ ಬುಲ್ಸ್ ತಂಡ 31-38 ಅಂಕಗಳಿಂದ ಸೋಲನುಭವಿಸುವ ಮೂಲಕ ಅಗ್ರಸ್ಥಾನದಿಂದ ಕುಸಿತ ಕಂಡಿತು. ಆರಂಭಿಕ ಮುನ್ನಡೆ ನಡುವೆಯೂ ಪಟನಾ ಅಬ್ಬರದ ಎದುರು ಆಘಾತ ಅನುಭವಿಸಿದ ಬುಲ್ಸ್ ತಂಡ 9ನೇ ನಿಮಿಷದಲ್ಲಿ ಆಲೌಟ್ ಆಗುವ ಮೂಲಕ 9-11 ರಿಂದ ಹಿನ್ನಡೆ ಕಂಡಿತು. ಮೊದಲಾರ್ಧದಲ್ಲಿ 16-20 ರಿಂದ ಹಿನ್ನಡೆ ಕಂಡ ಬುಲ್ಸ್ ತಂಡ, ಎರಡನೇ ಅವಧಿಯಾಟದಲ್ಲೂ ಸಂಪೂರ್ಣ ಮಂಕಾಯಿತು. 26ನೇ ನಿಮಿಷದಲ್ಲಿ ಎರಡನೇ ಬಾರಿಗೆ ಆಲೌಟ್ ಬುಲ್ಸ್ ತಂಡ 21-28 ರಿಂದ ಹಿನ್ನಡೆ ಕಂಡಿತು. ಸತತವಾಗಿ ಪಟನಾ ರಕ್ಷಣಾ ಪಡೆಯ ಬಲೆಗೆ ಬಿದ್ದ ನಾಯಕ ಪವನ್ ಶೇರವಾತ್ ಸುಮಾರು 25 ನಿಮಿಷಗಳ ಕಾಲ ಕೋರ್ಟ್‌ನಿಂದ ಹೊರಗುಳಿದಿದ್ದರು.

* ಟೈ ಪಂದ್ಯದಲ್ಲಿ ತಲೈವಾಸ್

ರೈಡರ್ ಮಂಜೀತ್ ಕಡೇ ರೈಡಿಂಗ್‌ನಲ್ಲಿ ಮಾಡಿದ ಎಡವಟ್ಟಿನಿಂದಾಗಿ ತಮಿಳ್ ತಲೈವಾಸ್ 31-31 ರಿಂದ ಜೈಪುರ ಪಿಂಕ್‌ಪ್ಯಾಂಥರ್ಸ್‌ ತಂಡದ ಎದುರು ಸಮಬಲ ಸಾಧಿಸಿತು. 2 ಅಂಕಗಳ ಮುನ್ನಡೆಯಲ್ಲಿದ್ದರೂ ಸೂಪರ್‌ಟ್ಯಾಕಲಿಂಗ್ ಆಗಿದ್ದ ಕಡೇ ರೈಡಿಂಗ್‌ನಲ್ಲಿ ಮಂಜೀತ್‌ಗೆ ಜೈಪುರ ಆಟಗಾರರು ಕಡಿವಾಣ ಹೇರಿದರು.

ಇಂದಿನ ಪಂದ್ಯಗಳು

ಪುಣೇರಿ ಪಲ್ಟಾನ್-ಯುಪಿ ಯೋಧಾ

ಆರಂಭ: ರಾತ್ರಿ 7.30

ತೆಲುಗು ಟೈಟಾನ್ಸ್-ಬೆಂಗಾಲ್ ವಾರಿಯರ್ಸ್‌

ಆರಂಭ: ರಾತ್ರಿ 8.30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net