

ಬೆಂಗಳೂರು: ಹೊಸತನದಿಂದ ಕೂಡಿದ ಬೆಂಗಳೂರು ಬುಲ್ಸ್ ತಂಡ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಶುಭಾರಂಭ ಕಾಣುವಲ್ಲಿ ಯಶಸ್ವಿಯಾಗಿದೆ. ಉದ್ಯಾನನಗರಿಯ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಟೂರ್ನಿಯ 2ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 34-29 ಅಂಕಗಳಿಂದ ಗೆಲುವು ದಾಖಲಿಸುವ ಮೂಲಕ ಮಹೇಂದರ್ ಸಿಂಗ್ ಬಳಗ ಭರ್ಜರಿ ಆರಂಭ ಕಂಡಿತು.
ಹಿನ್ನಡೆಯೂ ಎದುರಾಯಿತು. ಆದರೆ ಪಂದ್ಯ ಮುಕ್ತಾಯಕ್ಕೆ 7 ನಿಮಿಷಗಳಿರುವಾಗ ಟೈಟಾನ್ಸ್ ತಂಡವನ್ನು ಆಲೌಟ್ ಬಲೆಗೆ ಬೀಳಿಸಿದ ಬುಲ್ಸ್ ತಂಡ ಸ್ಪಷ್ಟ ಮೇಲುಗೈ ಸಾಧಿಸಿತು. ಬಳಿಕ ಪಂದ್ಯದ ಕೊನೆಯವರೆಗೂ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಬುಲ್ಸ್ ತಂಡ ಗೆಲುವು ದಾಖಲಿಸಿತು. ಬುಲ್ಸ್ ಪರ ನೀರಜ್ ನರ್ವಾಲ್ (7 ಅಂಕ), ವಿಕಾಸ್ ಖಂಡೋಲ (5 ಅಂಕ) ಮತ್ತು ಭರತ್ (5) ರೈಡಿಂಗ್ನಲ್ಲಿ ಗಮನಸೆಳೆದರು. ನಾಯಕ ಮಹೇಂದರ್ ಸಿಂಗ್ (4) ಮತ್ತು ಸೌರಭ್ ನಂದಲ್ (4) ರಕ್ಷಣಾ ವಿಭಾಗದಲ್ಲಿ ಆಸರೆಯಾದರು. ಟೈಟಾನ್ಸ್ ಪರ ವಿನಯ್ (7) ಮತ್ತು ರಜನೀಶ್ (7) ಬುಲ್ಸ್ ತಂಡವನ್ನು ಕಾಡಿದರು.
ಸಮಬಲ ಕಾದಾಟ
ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲಾರ್ಧದಲ್ಲಿ ಬುಲ್ಸ್-ಟೈಟಾನ್ಸ್ ತಂಡಗಳು 17-17ರಿಂದ ಸಮಬಲ ಸಾಧಿಸಿದವು. ಬುಲ್ಸ್ ತಂಡ ಆರಂಭಿಕ ಹಂತದಲ್ಲಿ ಮೇಲುಗೈ ಸಾಧಿಸಿದ್ದರೂ, ನಂತರದಲ್ಲಿ ಟೈಟಾನ್ಸ್ ತಿರುಗೇಟು ನೀಡಿತು. ಮೊದಲಾರ್ಧದಲ್ಲಿ ಉಭಯ ತಂಡಗಳು ತಲಾ ಒಮ್ಮೆ ಆಲೌಟ್ ಆದವು ಮತ್ತು ರೈಡಿಂಗ್-ಟ್ಯಾಕಲಿಂಗ್ನಲ್ಲೂ ಪರಸ್ಪರ ನಿಕಟ ಪೈಪೋಟಿ ತೋರಿದವು.