ಬೆಂಗಳೂರು ಬುಲ್ಸ್ ತಂಡಕ್ಕೆ 7ನೇ ಜಯ ; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಕೆ

pro bulls for web
Published on

ಬೆಂಗಳೂರು: ನಾಯಕ ಹಾಗೂ ಸ್ಟಾರ್ ರೈಡರ್ ಪವನ್ ಶೆರಾವತ್ (19 ಅಂಕ) ಭರ್ಜರಿ ನಿರ್ವಹಣೆ ಫಲವಾಗಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ 46-37 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಬುಲ್ಸ್ ತಂಡ ಆಡಿದ 10ನೇ ಪಂದ್ಯದಲ್ಲಿ 7ನೇ ಜಯ ದಾಖಲಿಸಿ 38 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, 5ನೇ ಸೋಲು ಕಂಡ ಗುಜರಾತ್ ತಂಡ 11ನೇ ಸ್ಥಾನಕ್ಕೆ ಕುಸಿತ ಕಂಡಿತು.

ಬುಲ್ಸ್ ತಂಡ ಆರಂಭಿಕ ನಿಮಿಷಗಳಲ್ಲಿ ಮಂದಗತಿಯಲ್ಲೇ ಆರಂಭ ಕಂಡರೂ ಬಳಿಕ ತಿರುಗೇಟು ನೀಡಲು ಯಶಸ್ವಿಯಾಯಿತು. ಪವನ್ ಶೆರಾವತ್ ಆಕರ್ಷಕ ರೈಡಿಂಗ್ ಫಲವಾಗಿ 13ನೇ ನಿಮಿಷದಲ್ಲಿ ಗುಜರಾತ್ ತಂಡವನ್ನು ಆಲೌಟ್ ಮಾಡಿದ ಬುಲ್ಸ್ ತಂಡ ಮುನ್ನಡೆ ಸಾಧಿಸಿತು. 15ನೇ ನಿಮಿಷದಲ್ಲಿ 15-11 ರಿಂದ ಮುನ್ನಡೆಯಲ್ಲಿದ್ದ ಬುಲ್ಸ್, ಮೊದಲಾರ್ಧದ ವೇಳೆಗೆ 22-16 ಅಂಕಗಳಿಗೆ ಹಿಗ್ಗಿಸಿಕೊಂಡಿತು. ದ್ವಿತೀಯಾರ್ಧವನ್ನು ಇಬ್ಬರು ಆಟಗಾರರೊಂದಿಗೆ ಆರಂಭಿಸಿದ ಗುಜರಾತ್ ತಂಡ ಆರಂಭದಲ್ಲಿ ಬುಲ್ಸ್ ಆಟಗಾರರು ಮಾಡಿಕೊಂಡ ಎಡವಟ್ಟಿನ ಲಾಭ ಪಡೆದುಕೊಳ್ಳಲು ಯತ್ನಿಸಿತು. ಇದರಿಂದಾಗಿ ಬುಲ್ಸ್ ತಂಡ 24ನೇ ನಿಮಿಷದಲ್ಲಿ 24-21ರಿಂದ ಕೊಂಚ ಮುನ್ನಡೆ ಕಂಡಿತು. 34ನೇ ನಿಮಿಷದವರೆಗೂ ಕೇವಲ 3-4 ಅಂಕಗಳ ಅಂತರದಲ್ಲೇ ಮುನ್ನಡೆ ಕಾಯ್ದುಕೊಂಡಿದ್ದ ಬುಲ್ಸ್, ಪವನ್ ಶೆರಾವತ್ ಭರ್ಜರಿ ರೈಡಿಂಗ್ ಲವಾಗಿ 37ನೇ ನಿಮಿಷದಲ್ಲಿ ಗುಜರಾತ್ ತಂಡವನ್ನು ಆಲೌಟ್ ಮಾಡಿ 44-35ರಿಂದ ಮುನ್ನಡೆ ಸಾಧಿಸಿತು. ರೈಡರ್ ಭರತ್ (9 ಅಂಕ) ನಿರ್ಣಾಯಕ ಹಂತದಲ್ಲಿ ಪಾಯಿಂಟ್ಸ್ ತರುವ ಮೂಲಕ ತಂಡಕ್ಕೆ ಆಸರೆಯಾದರು.

*ಪಟನಾ ಪರಾಭವ

ಸತತ ಗೆಲುವಿನ ನಾಗಾಲೋಟದಿಂದ ಬೀಗುತ್ತಿದ್ದ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಸಾರಥ್ಯದ ಪಟನಾ ಪೈರೇಟ್ಸ್ ತಂಡ ಸೋಲಿನ ಆಘಾತ ಕಂಡಿತು. ದಿನದ ಮೊದಲ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಟನಾ ತಂಡ 28-38 ಅಂಕಗಳಿಂದ ಜೈಪುರ ಪಿಂಕ್‌ಪ್ಯಾಂಥರ್ಸ್‌ ತಂಡಕ್ಕೆ ಶರಣಾಯಿತು. ಮೂರು ಜಯ, ಒಂದು ಟೈ ಸೇರಿದಂತೆ ಸತತ 4 ಪಂದ್ಯಗಳಲ್ಲಿ ಜಯವಾಗಿದ್ದ ಪಟನಾ ತಂಡ ನೀರಸ ನಿರ್ವಹಣೆ ತೋರಿತು. ಸ್ಟಾರ್ ರೈಡರ್ ಮೋನು ಗೋಯತ್‌ಗೆ (7ಅಂಕ) ಸತತವಾಗಿ ಬ್ರೇಕ್ ಹಾಕಿದ ಜೈಪುರ ತಂಡದ ಆಟಗಾರರು ಮುನ್ನಡೆ ಸಾಧಿಸಲು ಯಶಸ್ವಿಯಾದರು. ಮೊದಲಾರ್ಧದಲ್ಲಿ ಪಟನಾ ತಂಡವನ್ನು ಒಮ್ಮೆ ಆಲೌಟ್ ಮಾಡುವ ಮೂಲಕ ಜೈಪುರ 18-12 ರಿಂದ ಮುನ್ನಡೆ ಸಾಧಿಸಿದರೆ, ದ್ವಿತೀಯಾರ್ಧದಲ್ಲೂ ಇದೇ ಲಯ ಮುಂದುವರಿಸಿ ಜಯದ ನಗೆ ಬೀರಿತು. ಈ ಗೆಲುವಿನೊಂದಿಗೆ ಜೈಪುರ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net