ಬೆಂಗಳೂರು ಬುಲ್ಸ್‌ಗೆ ಸತತ 2ನೇ ಜಯ; ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ಗೆ ಆಘಾತ

bengaluru bulls match for web
Published on

ಬೆಂಗಳೂರು: ಆರಂಭಿಕ ಹಿನ್ನಡೆ ನಡುವೆಯೂ ತಿರುಗೇಟು ನೀಡಲು ಯಶಸ್ವಿಯಾದ ಬೆಂಗಳೂರು ಬುಲ್ಸ್ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ ಎರಡನೇ ಜಯ ದಾಖಲಿಸಿತು. ಭಾನುವಾರ ನಡೆದ ಹಣಾಹಣಿಯಲ್ಲಿ ಬೆಂಗಳೂರು ತಂಡ 36-35ರಿಂದ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ತಂಡದ ವಿರುದ್ಧ ರೋಚಕ ಜಯ ದಾಖಲಿಸಿತು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕನ್ನಡಿಗ ಬಿಸಿ ರಮೇಶ್ ಮಾರ್ಗದರ್ಶನದ ಬೆಂಗಾಲ್ ನಿರಾಸೆ ಕಂಡಿತು.

ಮಣಿಂದರ್ ಸಿಂಗ್ (17 ಅಂಕ) ಆಕರ್ಷಕ ರೈಡಿಂಗ್‌ನಿಂದಾಗಿ ಆರಂಭಿಕ ಹಂತದಲ್ಲೇ ಆಲೌಟ್ ಬಲೆಗೆ ಬಿದ್ದ ಬುಲ್ಸ್ ಭಾರಿ ಅಂತರದ ಹಿನ್ನಡೆ ಕಂಡಿತು. ಬಳಿಕ ನಾಯಕ ಪವನ್ ಶೆರಾವತ್ (15 ಅಂಕ) ಅದ್ಭುತ ನಿರ್ವಹಣೆಯಿಂದಾಗಿ ಬುಲ್ಸ್ ತಂಡ ವಾರಿಯರ್ಸ್‌ ತಂಡವನ್ನು ಆಲೌಟ್ ಮಾಡಿ ಮೊದಲಾರ್ಧದಲ್ಲಿ 18-17ರಿಂದ ಮುನ್ನಡೆ ಕಂಡಿತು. ತೀವ್ರ ರೋಚಕತೆಯಿಂದ ಕೂಡಿದ ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು. ಕಡೇ ಕ್ಷಣದಲ್ಲಿ ಡಾಂಗ್ ಜಿಯೊನ್ (2) ಭರ್ಜರಿ ರೈಡಿಂಗ್‌ನಿಂದಾಗಿ ಬುಲ್ಸ್ ತಂಡ ಮುನ್ನಡೆ ಕಂಡುಕೊಂಡು ರೋಚಕ ಗೆಲುವು ದಾಖಲಿಸಿತು.

*ಗುಜರಾತ್-ಡೆಲ್ಲಿ ಪಂದ್ಯ ಟೈ

ಗುಜರಾತ್ ಜೈಂಟ್ಸ್ ಮತ್ತು ದಬಾಂಗ್ ಡೆಲ್ಲಿ ನಡುವಿನ ದಿನದ ಮೊದಲ ಪಂದ್ಯ 24-24 ಅಂಕಗಳಿಂದ ಟೈಗೊಂಡಿತು. ಆರಂಭದಿಂದಲೂ ಜಿದ್ದಾಜಿದ್ದಿನಿಂದ ಕೂಡಿದ್ದ ಕಾದಾಟದಲ್ಲಿ ಡೆಲ್ಲಿ ತಂಡ ಮೊದಲಾರ್ಧದಲ್ಲಿ 12-11ರಿಂದ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲೂ ಪಟ್ಟುಬಿಟ್ಟುಕೊಡದ ಗುಜರಾತ್ ತಂಡ ಸಮಬಲದ ಗೌರವ ಹಂಚಿಕೊಂಡಿತು. ಡೆಲ್ಲಿ ತಂಡದ ಪರ ನವೀನ್ ಕುಮಾರ್ (11) ಮತ್ತೊಮ್ಮೆ ಮಿಂಚಿದರು ಮತ್ತು ಕೊನೇ ರೈಡ್‌ನಲ್ಲಿ ಅಂಕ ತಂದುಕೊಡುವ ಮೂಲಕ ಪಂದ್ಯವನ್ನು ಟೈಗೊಳಿಸಿದರು. ಗುಜರಾತ್ ಪರ ರಾಕೇಶ್ ನರ್ವಾಲ್ ಗರಿಷ್ಠ 9 ಅಂಕ ಗಳಿಸಿದರು. ಮೊದಲೆರಡು ಪಂದ್ಯ ಗೆದ್ದಿದ್ದ ಡೆಲ್ಲಿ (13 ಅಂಕ) ಹ್ಯಾಟ್ರಿಕ್ ಗೆಲುವಿನಿಂದ ವಂಚಿತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net