

ಹರಾರೆ: ಇಂಗ್ಲೆಂಡ್ ಕ್ರಿಕೆಟಿಗರಾದ ಸ್ಯಾಮ್ ಕರ‌್ರನ್ ಹಾಗೂ ಟಾಮ್ ಕರ‌್ರನ್ ಅವರ ಸಹೋದರ ಬೆನ್ ಕರ‌್ರನ್ ಜಿಂಬಾಬ್ವೆ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಮುಂಬರುವ ಅಫ್ಘಾನಿಸ್ತಾನ ಎದುರಿನ ಏಕದಿನ ಸರಣಿಗೆ 28 ವರ್ಷದ ಬ್ಯಾಟರ್ ಬೆನ್ ಕರ‌್ರನ್ ಜಿಂಬಾಬ್ವೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ತನ್ನ ತಂದೆ ಕೆವಿನ್ ಕರ‌್ರನ್ ಅವರ ಹೆಜ್ಜೆಗಳನ್ನು ಅನುಸರಿಸುವ ಮೂಲಕ ಜಿಂಬಾಬ್ವೆ ಪರ ಕಣಕ್ಕಿಳಿಯುವ ಆಸೆಯನ್ನು ಎರಡು ತಿಂಗಳ ಹಿಂದಷ್ಟೇ ಬೆನ್ ಹೇಳಿಕೊಂಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅವರು ಆಫ್ಘನ್ ವಿರುದ್ಧ ಸರಣಿಗೆ ಆಯ್ಕೆಯಾಗಿದ್ದಾರೆ. ಕರ‌್ರನ್ ಸಹೋದರರು ಇಂಗ್ಲೆಂಡ್‌ನಲ್ಲಿ ಜನಿಸಿದರೂ, ಜಿಂಬಾಬ್ವೆಯಲ್ಲಿ ಬಾಲ್ಯದ ದಿನಗಳನ್ನು ಕಳೆದಿದ್ದಾರೆ. ಆದರೆ ಮೂವರಲ್ಲಿ ಇಬ್ಬರು ಇಂಗ್ಲೆಂಡ್ ತಂಡವನ್ನು ಅನ್ನು ಪ್ರತಿನಿಧಿಸುತ್ತಿದ್ದಾರೆ. ಬೆನ್ ಕರ‌್ರನ್ ಬಾಕ್ಸಿಂಗ್ ಡೇ ಮತ್ತು ಹೊಸ ವರ್ಷದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಎರಡು ಟೆಸ್ಟ್‌ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಡಿಸೆಂಬರ್ 11ರಂದು ಹರಾರೆಯಲ್ಲಿ ಏಕದಿನ ಸರಣಿ ಆರಂಭವಾಗಲಿದೆ.
2025ರಲ್ಲಿ ಜಿಂಬಾಬ್ವೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಸಹೋದರರು ಪರಸ್ಪರ ಎದುರಾಗುವ ನಿರೀಕ್ಷೆ ಇದೆ. ತಂದೆ ಕೆವಿನ್ ಕರ‌್ರನ್ ಜಿಂಬಾಬ್ವೆ ಪರ 11 ಏಕದಿನ ಪಂದ್ಯಗಳನ್ನಾಡಿದ್ದು, 2005 ರಿಂದ 2007 ರವರೆಗೆ ಜಿಂಬಾಬ್ವೆಯ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಬೆನ್ ಅವರು ಅಫ್ಘಾನಿಸ್ತಾನದ ವಿರುದ್ಧ ಆಡಿದರೆ, ಕರ‌್ರನ್ ಕುಟುಂಬದ ನಾಲ್ಕನೇ ಕ್ರಿಕೆಟಿಗ ಎನಿಸಿದ್ದಾರೆ. ಕೆವಿನ್ ಕರ‌್ರನ್ ಅವರಿಗೆ ಜನಿಸಿದ ಮೂವರು ಗಂಡು ಮಕ್ಕಳಲ್ಲಿ ಬೆನ್ ಕರ‌್ರನ್ ಎರಡನೇ ಮಗನಾಗಿದ್ದು, ಸ್ಯಾಮ್ ಕರ‌್ರನ್ ಕಿರಿಯ ಎನಿಸಿದ್ದಾರೆ.