ಅಫ್ಘಾನಿಸ್ತಾನದ ಭರ್ಜರಿ ಪ್ರದರ್ಶನದ ಹಿಂದಿದೆ ಭಾರತದ ಪಾತ್ರ; ಹೇಗೆ ಗೊತ್ತಾ?

Afghanistan
Published on

ನವದೆಹಲಿ: ಚುಟುಕು ವಿಶ್ವ ಸಮರದಲ್ಲಿನ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಮೂಲಕ ಐಸಿಸಿ ನಡೆಸುವ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿರುವ ಅಫ್ಘಾನಿಸ್ತಾನ ತಂಡದ ಪರಿಶ್ರಮವನ್ನು ಕ್ರೀಡಾವಲಯದಲ್ಲಿ ಹಾಡಿ ಹೊಗಳಲಾಗುತ್ತಿದೆ. 2017ರಲ್ಲಿ ಐಸಿಸಿಯಿಂದ ಮಾನ್ಯತೆ ಪಡೆದ ಅಫ್ಘಾನಿಸ್ತಾನ ಕ್ರಿಕೆಟ್​ ತಂಡವನ್ನು ಕ್ರೀಡಾವಲಯದಲ್ಲಿ ಅಂಡರ್​ಡಾಗ್ಸ್​ ಎಂದು ಕರೆಯಲಾಗುತ್ತಿತ್ತು. 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್​ಗೇರಿರುವ ಅಫ್ಘಾನಿಸ್ತಾನ ತಂಡದ ಯಶಸ್ಸಿನಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಬಹುದಾಗಿದೆ.

ಹೌದು ಅಫ್ಘಾನಿಸ್ತಾನದ ಯಶಸ್ಸಿನಲ್ಲಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (BCCI) ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಈ ಹಿಂದೆ ಕ್ರಿಕೆಟ್​ ಶಿಶು ಎಂದು ಕರೆಯಲ್ಪಡುತ್ತಿದ್ದ ಅಫ್ಘಾನಿಸ್ತಾನ ತಂಡಕ್ಕೆ ಬಿಸಿಸಿಐ ಪೋಷಿಸಿದ ಪರಿಣಾಮ ಇಂದು ಬಲಿಷ್ಠ ತಂಡಗಳಿಗೆ ಸೋಲುಣಿಸುವಷ್ಟು ಬೆಳೆದಿದ್ದು, ಇದಕ್ಕೆ ಬಿಸಿಸಿಐ ನೀಡಿರುವ ಬೆಂಬಲವೇ ಕಾರಣ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಕಾರಣಗಳು ಹೀಗಿವೆ.

ಅಫ್ಘಾನಿಸ್ತಾನ ಕ್ರಿಕೆಟ್​ ತಂಡಕ್ಕೆ ಬಿಸಿಸಿಐ ಗ್ರೇಟರ್ ನೋಯ್ಡಾದಲ್ಲಿರುವ ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ಅನ್ನು 2015ರಲ್ಲಿ ತಾತ್ಕಾಲಿಕವಾಗಿ ಬಿಟ್ಟುಕೊಟ್ಟ ಪರಿಣಾಮ ತನ್ನ ಹೋಮ್​ ಗ್ರೌಂಡ್​ಅನ್ನು ಶಾರ್ಜಾದಿಂದ ಭಾರತಕ್ಕೆ ಸ್ಥಳಾಂತರಿಸಿತು. ಬಳಿಕ 2017ರಲ್ಲಿ ಐರ್ಲೆಂಡ್​ ವಿರುದ್ಧ ಆಂತರಾಷ್ಟ್ರೀಯ ಸರಣಿಯನ್ನು ಆಡಿತ್ತು.

BCCI

ಗ್ರೌಂಡ್​ ಮಾತ್ರವಲ್ಲದೇ ಅಫ್ಘಾನಿಸ್ತಾನ ತಂಡಕ್ಕೆ ಟೀಮ್​ ಇಂಡಿಯಾ ಮಾಜಿ ಆಟಗಾರರಾದ ಲಾಲ್‌ಚಂದ್ ರಜಪೂತ್, ಮನೋಜ್ ಪ್ರಭಾಕರ್ ಮತ್ತು ಅಜಯ್ ಜಡೇಜಾ ಅವರನ್ನು ಕೋಚ್​ ಆಗಿ ಕಾರ್ಯನಿರ್ವಹಿಸಿದ್ದಾರೆ. 2023ರಲ್ಲಿ ನಡೆದ ಏಕದಿನ ವಿಶ್ವಕಪ್​ ಸಮಯದಲ್ಲಿ ಅಜಯ್​ ಜಡೇಜಾ ಅವರು ಅಫ್ಘಾನಿಸ್ತಾನದ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿತ್ತು.

ಇದಲ್ಲದೆ ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ನಲ್ಲಿ ಅಫ್ಘಾನಿಸ್ತಾನ ತಂಡದ ಆಟಗಾರರು ಭಾಗಿಯಾಗುತ್ತಿದ್ದು, ಇದು ಅವರ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದಲ್ಲದೆ ಅಫ್ಘಾನಿಸ್ತಾನ ತಂಡದ ಆಟಗಾರರು ವಿಶ್ವದಲ್ಲಿ ನಡೆಯುವ ಟೂರ್ನಿಗಳಲ್ಲಿ ಭಾಗಿಯಾಗುತ್ತಿದ್ದು, ಇದು ಅವರ ಉತ್ತಮ ಪ್ರದರ್ಶನಕ್ಕೆ ಸಹಕಾರಿಯಾಗುತ್ತಿದೆ. ಈ ಮೂಲಕ ಬಿಸಿಸಿಐ ಅಫ್ಘಾನಿಸ್ತಾ ಕ್ರಿಕೆಟ್​ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net