ಕೋಚ್​​ ಗೌತಮ್​ ವಿರುದ್ಧ "ಗಂಭೀರ" ಆರೋಪ; Sarfaraz ಉಪನಾಮದ ಕಾರಣಕ್ಕೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ ಎಂದ ಕಾಂಗ್ರೆಸ್​ ವಕ್ತಾರೆ

Untitled design (14)
Published on

Delhi: ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಸರ್ಫರಾಜ್ (Sarfaraz) ಖಾನ್​ರನ್ನು ಆಯ್ಕೆ ಮಾಡದಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್, ಗೌತಮ್ ಗಂಭೀರ್ ವಿರುದ್ಧ ಧಾರ್ಮಿಕ ಪಕ್ಷಪಾತದ ಆರೋಪ ಹೊರಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಶಮಾ ಮೊಹಮ್ಮದ್, ಸರ್ಫರಾಜ್ ಅವರನ್ನು ಅವರ ಉಪನಾಮದ ಕಾರಣದಿಂದಲೇ ಆಯ್ಕೆ ಮಾಡಲಾಗಿಲ್ಲ ಎಂದರು. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ಎ ತಂಡಕ್ಕೆ ಸರ್ಫರಾಜ್​ರನ್ನು ಆಯ್ಕೆ ಮಾಡದ ಬಳಿಕ ಕಾಂಗ್ರೆಸ್ ನಾಯಕಿಯ ಈ ಹೇಳಿಕೆ ಹೊರಬಿದ್ದಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಸರ್ಫರಾಜ್​​​ರನ್ನು ಭಾರತ ಎ ತಂಡಕ್ಕೆ ಏಕೆ ಆಯ್ಕೆ ಮಾಡಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮಂಗಳವಾರ ಪ್ರಶ್ನಿಸಿದ್ದಾರೆ. ಬುಧವಾರ ಇಂಡಿಯಾ ಟುಡೇ ಜೊತೆ ಮಾತನಾಡಿದ ಎಐಎಂಐಎಂ ವಕ್ತಾರ ವಾರಿಸ್ ಪಠಾಣ್, ಒಬ್ಬ ವ್ಯಕ್ತಿ ಇಷ್ಟೊಂದು ಸರಾಸರಿ ಗಳಿಸುತ್ತಿದ್ದರೆ, ಅದರಲ್ಲಿ ಖಂಡಿತವಾಗಿಯೂ ಹೆಚ್ಚಿನದಿದೆ. ಅವನನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂದು ಪ್ರಶ್ನಿಸಿದರು. ದೀರ್ಘ ಕಾಲದ ನಂತರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸರ್ಫರಾಜ್, ಆರು ಟೆಸ್ಟ್‌ಗಳಲ್ಲಿ ಸುಮಾರು 40 ಸರಾಸರಿಯಲ್ಲಿ 371 ರನ್ ಗಳಿಸಿದ್ದಾರೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಭಾರತ ಪರ ಆಡಿದ ಕೊನೆಯ ಸರಣಿಯಲ್ಲಿ ಅವರು ಶತಕ (150) ಗಳಿಸಿದ್ದರು.

ಈ ನಡುವೆ ಉತ್ತರ ಪ್ರದೇಶದ ಮಾಜಿ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹ್ಸಿನ್ ರಜಾ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತೀಯ ಕ್ರಿಕೆಟ್‌ನಲ್ಲಿನ ಆಯ್ಕೆಯನ್ನು ರಾಜಕೀಯಗೊಳಿಸಬೇಡಿ ಎಂದಿದ್ದಾರೆ. ಇದನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ. ಈ ತಥಾಕಥಿತ ಮುಸ್ಲಿಂ ನಾಯಕರು (ಕಾಂಗ್ರೆಸ್ ಮತ್ತು ಓವೈಸಿಯನ್ನು ಟೀಕಿಸುತ್ತಾ) ಕ್ರಿಕೆಟಿಗರ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಈಗಾಗಲೇ ಶಮಿ, ಸಿರಾಜ್ ಆಡುತ್ತಿದ್ದಾರೆ ಎಂದು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net