

ನವದೆಹಲಿ: ಕ್ರಿಕಟ್ನಲ್ಲಿ ಎಷ್ಟೇ ದ್ವಿಪಕ್ಷೀಯ ಸರಣಿಗಳು ನಡೆದರೂ ಹೆಸರು, ಮನ್ನಣೆ ಜತೆಗೆ ಆದಾಯವೂ ಸಹ ಹರಿದು ಬರುತ್ತದೆ. ಪ್ರವಾಸಿಗರಿಂದ ಬರುವ ಆದಾಯದ ಜತೆಗೆ ಟಿಕೆಟ್ ಮಾರಾಟ ಇತ್ಯಾದಿಗಳ ರೂಪದಲ್ಲಿ ದೊಡ್ಡ ಪ್ರಮಾಣದ ಆದಾಯವನ್ನು ಗಳಿಸಲಾಗುತ್ತದೆ. ಅದಕ್ಕಾಗಿಯೇ ಎಲ್ಲ ಕ್ರಿಕೆಟ್ ರಾಷ್ಟ್ರಗಳು ಐಸಿಸಿ ಪಂದ್ಯಾವಳಿಗಳನ್ನು ಆಯೋಜಿಸಲು ಪೈಪೋಟಿ ನಡೆಸುತ್ತವೆ. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೆಗಾ ಇವೆಂಟ್ ಆಯೋಜಿಸುವ ಅವಕಾಶವನ್ನು ತಿರಸ್ಕರಿಸುವ ಮೂಲಕ ಅಚ್ಚರಿ ಮೂಡಿಸಿದೆ.
ವಿಶ್ವಕಪ್‌ನಂತಹ ದೊಡ್ಡ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶವನ್ನು ಯಾರೂ ನಿರಾಕರಿಸುವುದಿಲ್ಲ. ಆದರೆ ಬಿಸಿಸಿಐ ಆಯೋಜಿಸುವುದಿಲ್ಲ ಎಂದು ಹೇಳಿದೆ. ಬಿಸಿಸಿಐ ನಿರ್ಧಾರಕ್ಕೆ ಕಾರಣವೇನು? ಎಂಬುದನ್ನು ನಾವೀಗ ತಿಳಿಯೋಣ.
ಮಹಿಳಾ ಟಿ20 ವಿಶ್ವಕಪ್-2024 ಟೂರ್ನಿ ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು. ಈ ಮೆಗಾ ಟೂರ್ನಿ ಸೆಪ್ಟೆಂಬರ್‌ನಿಂದ ಆರಂಭವಾಗಬೇಕಿತ್ತು. ಆದರೆ, ಬಾಂಗ್ಲಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಿರು ವಿಶ್ವಕಪ್ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಬಾಂಗ್ಲಾದೇಶದ ಕ್ರಿಕೆಟ್ ಆಡಳಿತ ಮಂಡಳಿ, ಬಿಸಿಸಿಐಗೆ ತಮ್ಮ ದೇಶದ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಭಾರತದಲ್ಲಿ ಮಹಿಳಾ ವಿಶ್ವಕಪ್ ಆಯೋಜಿಸುವಂತೆ ಕೇಳಿದೆ. ಐಸಿಸಿ ಕೂಡ ಭಾರತಕ್ಕೆ ಈ ಆಫರ್ ನೀಡಿದೆ. ಆದರೆ, ಮೆಗಾ ಟೂರ್ನಮೆಂಟ್ ಅನ್ನು ಆಯೋಜಿಸಲು ಬಿಸಿಸಿಐ ನೋ ಎಂದಿದೆಯಂತೆ.
ಐಸಿಸಿ ಮನವಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ತಿಂಗಳುಗಳಲ್ಲಿ ದೇಶೀಯ ಕ್ರಿಕೆಟ್ ಹಾಗೂ ಟೀಮ್ ಇಂಡಿಯಾ ಸರಣಿಗಳಿವೆ. ಅಲ್ಲದೆ, ಮುಂದಿನ ವರ್ಷ ಮಹಿಳಾ ಏಕದಿನ ವಿಶ್ವಕಪ್ ಕೂಡ ಭಾರತದಲ್ಲಿ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಯ್ ಷಾ ಅವರು ಐಸಿಸಿ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಬ್ಯಾಕ್ ಟು ಬ್ಯಾಕ್ ಮಹಿಳಾ ಟಿ20 ವಿಶ್ವಕಪ್ ಮತ್ತು ಮಹಿಳಾ ಏಕದಿನ ವಿಶ್ವಕಪ್ ನಡೆಸಲು ಒಪ್ಪುವುದಿಲ್ಲ ಎಂದು ಜಯ್ ಷಾ ಹೇಳಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ದುಲೀಪ್ ಟ್ರೋಫಿ ಹಾಗೂ ಬಾಂಗ್ಲಾದೇಶ ಸರಣಿ ಸೇರಿದಂತೆ ಅನೇಕ ಸರಣಿಗಳು ಎದುರಾಗಲಿದ್ದು, ಒತ್ತಡಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಬಿಸಿಸಿಐ ಬೇಡ ಎಂದ ಬಳಿಕ ಮಹಿಳಾ ಟಿ20 ವಿಶ್ವಕಪ್‌ಗೆ ಯಾರು ಆತಿಥ್ಯ ವಹಿಸುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಮೆಗಾ ಟೂರ್ನಿ ಆಯೋಜಿಸಲು ಐಸಿಸಿ ಯಾವ ಹೆಜ್ಜೆ ಇಡಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)