ಆಸಿಸ್​ ಸರಣಿ ನಂತರ ಕ್ರಿಕೆಟ್​ನಿಂದ ರೋಹಿತ್​-ಕೊಹ್ಲಿ ವಿದಾಯ ಚರ್ಚೆ; ನಿವೃತ್ತಿ ಆಯ್ಕೆ ಆಟಗಾರರಿಗೆ ಬಿಟ್ಟಿದ್ದು ಎಂದ Rajiv Shukla

Rohit Sharma and Virat Kohli
Published on

Delhi: ಮುಂಬರುವ ಆಸ್ಟ್ರೇಲಿಯಾ ಸರಣಿಯ ಬಳಿಕ ಭಾರತದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿ ಹೊಂದಲಿದ್ದಾರೆ ಎಂಬ ವದಂತಿಗಳನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ( Rajiv Shukla) ಮಂಗಳವಾರ (ಅ 14) ತಳ್ಳಿಹಾಕಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಶುಕ್ಲಾ, ದಿಗ್ಗಜ ಆಟಗಾರರಾದ ರೋಹಿತ್ ಮತ್ತು ವಿರಾಟ್ ಉಪಸ್ಥಿತಿ ತಂಡದ ವಾತಾವರಣಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅವರಿಬ್ಬರ ಉಪಸ್ಥಿತಿಯಲ್ಲಿ ನಾವು ಆಸ್ಟ್ರೇಲಿಯಾ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಇದು ಅವರ ಕೊನೆಯ ಸರಣಿಯಾಗಲಿದೆ ಎನ್ನುವುದೆಲ್ಲಾ ಸುಳ್ಳು, ಅದು ಅಂತಹದ್ದೇನೂ ಅಲ್ಲ. ಅವರು ಯಾವಾಗ ನಿವೃತ್ತರಾಗುತ್ತಾರೆ ಎಂಬುದು ಆಟಗಾರರಿಗೆ ಬಿಟ್ಟ ವಿಷಯ ಎಂದರು.

ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ, ಆಸ್ಟ್ರೇಲಿಯಾ ಪ್ರವಾಸದ ಮೂಲಕ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಸರಣಿಗೂ ಮುನ್ನ, ಆಯ್ಕೆ ಸಮಿತಿ ಶುಭಮಾನ್​ ಗಿಲ್​ರನ್ನು ಏಕದಿನ ತಂಡದ ನೂತನ ನಾಯಕರನ್ನಾಗಿ ನೇಮಿಸಿದೆ. ಮುಂಬರುವ ಏಕದಿನ ವಿಶ್ವಕಪ್‌ಗೆ ಎರಡು ವರ್ಷಗಳ ಸಮಯವಿರುವಾಗ ದೊಡ್ಡ ಟೂರ್ನಿಗೆ ತಯಾರಿ ನಡೆಸಲು ಗಿಲ್‌ಗೆ ಸಾಕಷ್ಟು ಸಮಯಾವಕಾಶ ನೀಡುವ ಸಲುವಾಗಿ ಆಯ್ಕೆ ಸಮಿತಿಯು ನಾಯಕತ್ವದ ಜವಾಬ್ದಾರಿಯನ್ನು ಅವರ ಹೆಗಲಿಗೆ ವರ್ಗಾಯಿಸಿದೆ.

ಆಸಿಸ್​ ಸರಣಿಗೆ ಮುಂಚಿತವಾಗಿ, ರೋಹಿತ್ ಮತ್ತು ಕೊಹ್ಲಿ ಇಬ್ಬರೂ ದೆಹಲಿಗೆ ತೆರಳಿದ್ದು, ಅಲ್ಲಿಂದ ಬುಧವಾರ (ಅಕ್ಟೋಬರ್ 15) ಬೆಳಗಿನ ಜಾವ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ ಎಂದು ವರದಿಯಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ಮೊದಲ ಪಂದ್ಯ ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ನಡೆಯಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net