ಟಿ20ಯಲ್ಲಿ ಹೊಸ ಟೂರ್ನಿಗೆ ಐಸಿಸಿ ತಯಾರಿ: 2023-2031ರ ಎಫ್​ಟಿಪಿಯಲ್ಲಿ ಟಿ20 ಚಾಂಪಿಯನ್ಸ್ ಕಪ್ ಆಯೋಜನೆಗೆ ಭಾರಿ ಸಿದ್ಧತೆ

BCCI
Published on

ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ 2023 ರಿಂದ 2031ರ ಭವಿಷ್ಯದ ಕ್ರಿಕೆಟ್ ಸರಣಿಗಳ ವೇಳಾಪಟ್ಟಿಯಲ್ಲಿ (ಎಫ್​ಟಿಪಿ)ಎರಡು ಹೊಸ ಟೂರ್ನಿಯನ್ನು ಆಯೋಜನೆ ಮಾಡುವ ಕುರಿತಾಗಿ ಯೋಚನೆ ಮಾಡಿದೆ.

2023ರಿಂದ ಆರಂಭವಾಗಿ ಮುಂದಿನ ಎಂಟು ವರ್ಷಗಳ ಎಫ್​ಟಿಪಿಯಲ್ಲಿ ಟಿ20 ಚಾಂಪಿಯನ್ಸ್ ಕಪ್ ಎನ್ನುವ ಹೊಸ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಶ್ವದ ಅಗ್ರ 10 ತಂಡಗಳು ಈ ಟೂರ್ನಿಯಲ್ಲಿ ಆಡಲಿದ್ದು, ಒಟ್ಟು 48 ಪಂದ್ಯಗಳು ಇರಲಿವೆ. ಕಳೆದ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಇಷ್ಟೇ ಪಂದ್ಯಗಳು ನಡೆದಿದ್ದವು.

ಐಸಿಸಿಯ ಶಿಫಾರಸಿನ ಪ್ರಕಾರ, 2024 ಹಾಗೂ 2028ರಲ್ಲಿ ಐಸಿಸಿ ಟಿ20 ಚಾಂಪಿಯನ್ಸ್ ಕಪ್ ನಡೆಯಲಿದ್ದರೆ, 2025 ಹಾಗೂ 2029ರಲ್ಲಿ ಐಸಿಸಿ ಒಡಿಐ ಚಾಂಪಿಯನ್ಸ್ ಕಪ್ ನಡೆಯಲಿದೆ. ಅದರೊಂದಿಗೆ 2026ರ ಹಾಗೂ 2030ರಲ್ಲಿ ಟಿ20 ವಿಶ್ವಕಪ್, 2027 ಹಾಗೂ 2031ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಏಕದಿನ ಮಾದರಿಯಲ್ಲಿ ನಡೆಸಲಾಗುವ ಒಡಿಐ ಚಾಂಪಿಯನ್ಸ್ ಕಪ್​ಅನ್ನು ಈ ಹಿಂದಿನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮಾದರಿಯಲ್ಲಿ ನೋಡಬಹುದಾಗಿದೆ. ಇನ್ನು ಟಿ20 ಚಾಂಪಿಯನ್ಸ್ ಕಪ್ ಟೂರ್ನಿಯನ್ನು ವಿಶ್ವಕಪ್ ರೀತಿಯಲ್ಲಿ ಪರಿಗಣನೆ ಆಗುವ ಸಾಧ್ಯತೆ ಇದೆ.

2023 ರಿಂದ 2031ರವರೆಗೆ ನಡೆಯಲಿರುವ ಐಸಿಸಿ ಜಾಗತಿಕ ಟೂರ್ನಿಯ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ಪೂರ್ಣ ಸದಸ್ಯ ರಾಷ್ಟ್ರಗಳಿಗೆ ಮಾರ್ಚ್ 15ರ ವರೆಗೆ ಅವಕಾಶ ನೀಡಲಾಗಿದೆ.

ಬಲಿಷ್ಠ ಕ್ರಿಕೆಟ್ ಸಂಸ್ಥೆಗಳ ವಿರೋಧ: ಪ್ರತಿ ವರ್ಷ ಐಸಿಸಿಯ ಜಾಗತಿಕ ಟೂರ್ನಿ ನಡೆಸುವ ಬಗ್ಗೆ ವಿಶ್ವದ ಬಲಿಷ್ಠ ಕ್ರಿಕೆಟ್ ಸಂಸ್ಥೆಗಳಾದ ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರೋಧ ವ್ಯಕ್ತಪಡಿಸಿದ್ದು, ದ್ವಿಪಕ್ಷೀಯ ಸರಣಿಗಳ ಆಯೋಜನೆಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಅಭಿಪ್ರಾಯವ್ಯಕ್ತಪಡಿಸಿದೆ. ಐಸಿಸಿ ಪ್ರಸ್ತಾಪ ಮಾಡಿರುವ ಈ ಟೂರ್ನಿಗಳು ನಡೆದಲ್ಲಿ, ದ್ವಿಪಕ್ಷೀಯ ಸರಣಿಗಳ ಸಂಖ್ಯೆ ಇಳಿಕೆಯಾಗಲಿದೆ. ಇದು ಆಯಾ ಕ್ರಿಕೆಟ್ ಸಂಸ್ಥೆಗಳ ಆದಾಯದ ಮೇಲೆ ಪರಿಣಾಮ ಬೀರಲಿದೆ.

ಬಿಸಿಸಿಐ ಪ್ರಬಲ ವಿರೋಧ

ಬಲಿಷ್ಠ ಕ್ರಿಕೆಟ್ ಮಂಡಳಿಯ ವಿರೋಧವನ್ನು ಲೆಕ್ಕಿಸದೆ ಜಾಗತಿಕ ಟೂರ್ನಿಯನ್ನು ಅಂತಿಮ ಮಾಡಿದ ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ. ಮಾರ್ಚ್ ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಇದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಲಿದೆ. ‘ಜಾಗತಿಕ ಟೂರ್ನಿಗೂ ಮುನ್ನ ದ್ವಿಪಕ್ಷೀಯ ಸರಣಿ ಅಂತಿಮವಾಗಬೇಕು ಎಂದು ನಾವು ಬಯಸಿದ್ದೆವು. ಬಲಿಷ್ಠ ಕ್ರಿಕೆಟ್ ಮಂಡಳಿಗಳು ಜಾಗತಿಕ ಟೂರ್ನಿಗೆ ಆಸಕ್ತಿ ತೋರದೇ ಇದ್ದ ಪಕ್ಷದಲ್ಲಿ ಐಸಿಸಿ ಇವುಗಳನ್ನು ಹೇಗೆ ನಡೆಸುತ್ತದೆ. ಪ್ರತಿ ವರ್ಷವೂ ಐಸಿಸಿ ಟೂರ್ನಿ ನಡೆಯುವುದರಿಂದ ಕ್ರಿಕಟಿಗರು ಕಷ್ಟಪಡಬೇಕಾಗುತ್ತದೆ. ದ್ವಿಪಕ್ಷೀಯ ಸರಣಿಗಳು ಪ್ರಮುಖ. ಐಸಿಸಿಯ ಈ ನಿರ್ಧಾರ ಐಪಿಎಲ್, ಬಿಗ್​ಬಾಷ್​ನಂಥ ಲೀಗ್​ಗಳಿಗೆ ಅಪಾಯಕಾರಿ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net