ಪಂದ್ಯ ಗೆದ್ದರೂ ತಪ್ಪಲಿಲ್ಲ ಸಂಕಷ್ಟ! ಕ್ಯಾಪ್ಟನ್ ರಿಷಭ್ ಪಂತ್​ಗೆ ಎಚ್ಚರಿಕೆ ಗಂಟೆ | Rishabh Pant

ವಿಜಯವಾಣಿ - 2025-04-05T121339.954
Published on

Rishabh Pant: ನಿನ್ನೆ (ಏ.04) ಏಕಾನ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್​ ನಡುವಿನ ಪಂದ್ಯದಲ್ಲಿ ಎಲ್​ಎಸ್​ಜಿ 12 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಲಖನೌ ನೀಡಿದ 204 ರನ್​ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್​ಗೆ ಉತ್ತಮ ಸಾಥ್​ ಸಿಗಲಿಲ್ಲ. ಈ ಮೂಲಕ ಹೀನಾಯ ಸೋಲು ಅನುಭವಿಸಿತು. ಇನ್ನು ಪಂದ್ಯ ಗೆದ್ದ ಖುಷಿಯಲ್ಲಿದ್ದ ಎಲ್​ಎಸ್​ಜಿ ನಾಯಕ ರಿಷಭ್ ಪಂತ್​ಗೆ ಬಿಸಿಸಿಐ ದಂಡ ವಿಧಿಸಿದೆ.

12 ರನ್​ಗಳ ಜಯ ಕಂಡ ಲಖನೌ ಸೂಪರ್​ ಜೈಂಟ್ಸ್​, 20 ಓವರ್​ಗಳನ್ನು ನಿಗದಿತ ಸಮಯದೊಳಗೆ ಮುಗಿಸುವಲ್ಲಿ ವಿಫಲಗೊಂಡಿತು. ಈ ಆವೃತ್ತಿಯಲ್ಲಿ ಮೊದಲ ಮಂದಗತಿಯ ಓವರ್​ ಮಾಡಿದ ಹಿನ್ನೆಲೆ ಬಿಸಿಸಿಐ ರಿಷಭ್ ಪಂತ್​ಗೆ 12 ಲಕ್ಷ ರೂ. ದಂಡವನ್ನು ವಿಧಿಸಿದೆ. ಕಳೆದ ಬಾರಿಯ ಆವೃತ್ತಿಯಲ್ಲಿಯೂ ಇದೇ ರೀತಿಯಲ್ಲಿ ಸತತ ಮೂರನೇ ಬಾರಿಗೆ ಮಂದಗತಿಯ ಓವರ್​ ರೇಟ್​ ನಿಭಾಯಿಸಿದ್ದ ಕಾರಣಕ್ಕೆ ಒಂದು ಪಂದ್ಯದಿಂದ ರಿಷಭ್​ ಹೊರಗುಳಿದಿದ್ದರು. ಈಗ 18ನೇ ಆವೃತ್ತಿಯಲ್ಲಿ ಎಲ್​ಎಸ್​ಜಿ ಪರ ಮೊದಲನೇ ಸ್ಲೋ ಓವರ್ ಮಾಡಿರುವ ಕಾರಣ 12 ಲಕ್ಷ ರೂ. ದಂಡಕ್ಕೆ ತುತ್ತಾಗಿದ್ದಾರೆ.

ಈ ಹಿಂದೆ ಮೂರು ಪಂದ್ಯಗಳಲ್ಲಿ ತಂಡವು ಮಂದಗತಿಯ ಓವರ್​ ಮಾಡಿದ್ದಲ್ಲಿ ಆ ತಂಡದ ಕ್ಯಾಪ್ಟನ್​ಗೆ ಭಾರೀ ದಂಡದ ಜತೆಗೆ ಮುಂಬರುವ ಒಂದು ಪಂದ್ಯದಿಂದ ನಿಷೇಧಿಸಲಾಗುತ್ತಿತ್ತು. ಆದ್ರೆ, 18ನೇ ಆವೃತ್ತಿಯಿಂದ ಈ ನಿಯಮವನ್ನು ತೆಗೆದುಹಾಕಿರುವ ಬಿಸಿಸಿಐ, ಕ್ಯಾಪ್ಟನ್​ರನ್ನು ಒಂದು ಪಂದ್ಯದಿಂದ ನಿಷೇಧಿಸುವ ನೀತಿಯನ್ನು ಬದಲಿಸಿ, ಕೇವಲ ದಂಡವನ್ನು ಮಾತ್ರ ವಿಧಿಸಲು ನಿರ್ಧರಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net