

ನವದೆಹಲಿ: ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್ ಕ್ರಿಕೆಟ್ ಟೂನಿರ್ ಆಯೋಜನೆ ಸೇರಿದಂತೆ ಮುಂಬರುವ ಕ್ರಿಕೆಟ್ ಸರಣಿಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಮೇ 29ರಂದು ಬಿಸಿಸಿಐನ ವಿಶೇಷ ಮಹಾಸಭೆ (ಎಸ್ಜಿಎಂ) ನಿಗದಿಯಾಗಿದೆ. ಈ ಕುರಿತು ಬಿಸಿಸಿಐ ಕಾರ್ಯದಶಿರ್ ಜಯ್ ಷಾ, ರಾಜ್ಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕೋವಿಡ್-19 ಹಾವಳಿ ನಡುವೆ ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಯಾವೆಲ್ಲ ಟೂರ್ನಿಗಳನ್ನು ಆಯೋಜಿಸಬಹುದು ಎಂಬ ಕುರಿತು ಕೂಡ ಪ್ರಮುಖವಾಗಿ ಚರ್ಚೆ ನಡೆಯಲಿದೆ. ಭಾರತದಲ್ಲಿ ಕರೊನಾ 2ನೇ ಅಲೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ಆಯೋಜನೆಯೇ ಬಿಸಿಸಿಐಗೆ ದೊಡ್ಡ ಸವಾಲಾಗಿದೆ.
ಟಿ20 ವಿಶ್ವಕಪ್ ಭವಿಷ್ಯ ನಿರ್ಧರಿಸುವ ಕುರಿತು ಜೂನ್ 1ರಂದು ಐಸಿಸಿ ವಿಶೇಷ ಸಭೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಎಸ್ಜಿಎಂ ಮಹತ್ವ ಪಡೆದಿದೆ. ಟಿ20 ವಿಶ್ವಕಪ್ಗೆ ಯುಎಇಯನ್ನು ಮೀಸಲು ತಾಣವಾಗಿ ಐಸಿಸಿ ಈಗಾಗಲೆ ಗುರುತಿಸಿದ್ದು, ಭಾರತದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿ ಮೊಟಕುಗೊಂಡ ಬಳಿಕ ಸ್ಥಳಾಂತರದ ಸಾಧ್ಯತೆ ಹೆಚ್ಚಾಗಿತ್ತು. ಆದರೆ, ಭಾರತದಲ್ಲೇ ಟೂರ್ನಿ ಆಯೋಜಿಸುವ ಕುರಿತು ಬಿಸಿಸಿಐ ಈಗಲೂ ಒಲವು ಹೊಂದಿದೆ ಎನ್ನಲಾಗಿದೆ. ಕಳೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ. ಹೈದರಾಬಾದ್, ಕೋಲ್ಕತ, ಲಖನೌ ಹಾಗೂ ಮುಂಬೈ ನಗರಗಳಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ದೇಶದ 2-3 ತಾಣಗಳಲ್ಲೇ ಪಂದ್ಯ ನಡೆಸಿ, ಆತಿಥ್ಯವನ್ನು ಉಳಿಸಿಕೊಳ್ಳಲು ಬಿಸಿಸಿಐ ಆದ್ಯತೆ ನೀಡಿದೆ.