

ನವದೆಹಲಿ: ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಪುತ್ರರಾಗಿರುವ 32 ವರ್ಷದ ಜಯ್ ಷಾ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮುಖ್ಯಸ್ಥ ನಜ್ಮುಲ್ ಹಸನ್ ಪಪೊನ್ ಸ್ಥಾನ ತುಂಬಲಿದ್ದಾರೆ. ಈ ವಿಷಯವನ್ನು ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲ್ ಟ್ವಟರ್‌ನಲ್ಲಿ ಪ್ರಕಟಿಸಿದ್ದಾರೆ. ಈ ಸ್ಥಾನ ಅಲಂಕರಿಸಿದ ಅತಿಕಿರಿಯ ಆಡಳಿತಗಾರ ಎನಿಸಿಕೊಂಡರು.
‘ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಆಯ್ಕೆಯಾದ ಜಯ್ ಷಾಗೆ ಅಭಿನಂದನೆಗಳು, ನಿಮ್ಮ ನಾಯಕತ್ವದಲ್ಲಿ ಎಸಿಸಿ ಮತ್ತಷ್ಟು ಉತ್ತುಂಗಕ್ಕೇರಲಿ. ಶುಭಾಶಯಗಳು ನಿಮಗೆ’ ಎಂದು ಬರೆದುಕೊಂಡಿದ್ದಾರೆ. ಏಷ್ಯಾಕಪ್ ಟೂರ್ನಿಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಎಸಿಸಿ ಹೊಂದಿದೆ. 2020ರ ಜೂನ್‌ನಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಯೂ ಕರೊನಾ ವೈರಸ್ ಭೀತಿಯಿಂದ ಮುಂದೂಡಿಕೆಯಾಗಿದೆ. ಪೂರ್ವನಿಗದಿಯಂತೆ ಪಾಕಿಸ್ತಾನ ಟೂರ್ನಿಯನ್ನು ಆಯೋಜಿಸಬೇಕಿತ್ತು. ಆದರೀಗ ಶ್ರೀಲಂಕಾ ಅಥವಾ ಬಾಂಗ್ಲಾದೇಶ ತಂಡಗಳು ಆಯೋಜಿಸುವ ಸಾಧ್ಯತೆಗಳಿವೆ.