ಐಪಿಎಲ್ ಬಹುಮಾನ ಮೊತ್ತದ ಬಗ್ಗೆ ಬಿಸಿಸಿಐ ಗೊಂದಲ ಮೂಡಿಸಿದ್ದೇಕೆ?

shreyas aiyer with check.jpg for web
Published on

ದುಬೈ: ಅಂತು-ಇಂತೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರಬ್ ರಾಷ್ಟ್ರದಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಮುಗಿಸಿದೆ. ಟೂರ್ನಿ ಆರಂಭದಿಂದ ಫೈನಲ್‌ವರೆಗೂ ರೋಚಕತೆ ಕಾಯ್ದುಕೊಂಡಿತು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಸಿಸಿಐ ತೆಗೆದುಕೊಂಡ ಒಂದು ನಿರ್ಧಾರ ಎಲ್ಲರ ಅಚ್ಚರಿಗೆ ಕಾರಣವಾಯಿತು. ಅದೆನೆಂದರೆ, ಕರೊನಾ ವೈರಸ್ ಭೀತಿಯಿಂದಾಗಿ ಬಹುಮಾನ ಮೊತ್ತ ಕಡಿತಗೊಳಿಸಿಸುವುದಾಗಿ ಲೀಗ್ ಆರಂಭಕ್ಕೂ ಮುನ್ನ ಬಿಸಿಸಿಐ ಹೇಳಿಕೊಂಡಿತ್ತು. ಆದರೆ, ಯಾವುದೇ ಮಾಹಿತಿ ನೀಡದೆ, ಹಿಂದಿನ ಆವೃತ್ತಿಗಳಲ್ಲಿ ನೀಡಲಾಗುತ್ತಿದ್ದ ಬಹುಮಾನ ಮೊತ್ತದ ಚೆಕ್‌ಅನ್ನೇ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿತು.

ಚಾಂಪಿಯನ್‌ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್ ತಂಡ, ಟ್ರೋಫಿ ಜತೆಗೆ 20 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದರೆ, ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ 12.5 ಕೋಟಿ ರೂಪಾಯಿ ಪಡೆಯಿತು. ಲೀಗ್ ಆರಂಭದಲ್ಲಿ ವಿಜೇತ ತಂಡ 10 ಕೋಟಿ ಹಾಗೂ ರನ್ನರ್‌ಅಪ್ ತಂಡಕ್ಕೆ 6.50 ಕೋಟಿ ಬಹುಮಾನ ಎಂದು ಘೋಷಿಸಿತ್ತಾದರೂ ಕಡೇ ಕ್ಷಣದಲ್ಲಿ ಬಹುಮಾನ ಮೊತ್ತವನ್ನು ಬಿಸಿಸಿಐ ಪರಿಷ್ಕರಿಸಿತು. ಪ್ಲೇಆಫ್ ಹಂತಕ್ಕೇರಿದ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಆರ್‌ಸಿಬಿ ತಂಡಗಳು ತಲಾ 8.75 ಕೋಟಿ ಪಡೆದುಕೊಂಡವು. ಬಹುಮಾನ ಪರಿಷ್ಕರಣೆ ಕುರಿತು ಬಿಸಿಸಿಐನಿಂದ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ.

ಕಳೆದ 53 ದಿನಗಳಿಂದ ಯುಎಇಯ ಪ್ರಮುಖ ನಗರಗಳಾದ ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲಿ ಪ್ರತಿಷ್ಠಿತ ಲೀಗ್ ಆಯೋಜಿಸಲಾಯಿತು. ಮಂಗಳವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈಇಂಡಿಯನ್ಸ್ ತಂಡ 5 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ 5ನೇ ಬಾರಿಗೆ ಚಾಂಪಿಯನ್‌ಪಟ್ಟ ಅಲಂಕರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net